
ನವದೆಹಲಿ: ನೀಟ್-ಯುಜಿ 2026 ಮರು ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಮೇಲೆ ಹೇರಲಾಗಿದ್ದ ತಾತ್ಕಾಲಿಕ ನಿಷೇಧವನ್ನು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಹಿಂಪಡೆದಿದ್ದು, ಇಂದಿನಿಂದ ಸೇವೆ ಪುನರಾರಂಭಗೊಳ್ಳಲಿದೆ. ಆದರೆ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಟೆಲಿಗ್ರಾಮ್ನ ಪ್ರಮುಖ ವೈಶಿಷ್ಟ್ಯವಾದ ‘ಮೆಸೇಜ್ ಎಡಿಟಿಂಗ್’ ಆಯ್ಕೆಯ ಮೇಲಿನ ನಿರ್ಬಂಧವನ್ನು ಜೂನ್ 30ರವರೆಗೆ ಮುಂದುವರಿಸಲಾಗಿದೆ. ಪ್ರಸ್ತುತ ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆ್ಯಪ್ ಸ್ಟೋರ್ಗಳಲ್ಲಿ ಟೆಲಿಗ್ರಾಮ್ ಸಂಪೂರ್ಣವಾಗಿ ಮರುಲಭ್ಯವಾಗದಿದ್ದರೂ, ಇಂಟರ್ನೆಟ್ ಸೇವಾ ಪೂರೈಕೆದಾರರು (ISP) ಹಂತಹಂತವಾಗಿ ನಿರ್ಬಂಧ ತೆರವುಗೊಳಿಸುತ್ತಿರುವುದರಿಂದ ದೇಶದಾದ್ಯಂತ ಬಳಕೆದಾರರಿಗೆ ಶೀಘ್ರದಲ್ಲೇ ಸೇವೆ ಸಂಪೂರ್ಣ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ನಡೆದ ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಟೆಲಿಗ್ರಾಮ್ ಚಾನೆಲ್ಗಳ ಮೂಲಕ ಸೋರಿಕೆಯಾಗಿದ್ದು, ಅಕ್ರಮವಾಗಿ ಮಾರಾಟವಾಗುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು. ಜೂನ್ 21ರಂದು ನಡೆದ ನೀಟ್ ಮರು ಪರೀಕ್ಷೆಯ ವೇಳೆ ಯಾವುದೇ ರೀತಿಯ ಅಕ್ರಮ ನಡೆಯದಂತೆ ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಶಿಫಾರಸಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಕೇಂದ್ರ ಸರ್ಕಾರ ಟೆಲಿಗ್ರಾಮ್ಗೆ ತಾತ್ಕಾಲಿಕ ನಿಷೇಧ ಹೇರಿತ್ತು. ಪರೀಕ್ಷಾ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ತೆಗೆದುಕೊಂಡ ಈ ಕ್ರಮ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.
ನಿಷೇಧದ ವಿರುದ್ಧ ಟೆಲಿಗ್ರಾಮ್ ಸಂಸ್ಥೆ ದೆಹಲಿ ಹೈಕೋರ್ಟ್ಗೆ ಮೊರೆ ಹೋಗಿದ್ದರೂ, ಸರ್ಕಾರದ ಕ್ರಮ ಕಾನೂನುಬದ್ಧವಾಗಿದೆ ಎಂದು ನ್ಯಾಯಮೂರ್ತಿ ತೇಜಸ್ ಕರಿಯಾ ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದ್ದರು. ವಿಚಾರಣೆ ವೇಳೆ ಟೆಲಿಗ್ರಾಮ್ ಸಂಸ್ಥೆ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಲಿಂಕ್ಗಳನ್ನು ಈಗಾಗಲೇ ತೆಗೆದುಹಾಕಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಆದರೂ ಪರೀಕ್ಷೆಯ ಪಾರದರ್ಶಕತೆ ಮತ್ತು ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ನಿರ್ಬಂಧ ಅಗತ್ಯ ಎಂದು ಸರ್ಕಾರ ವಾದಿಸಿತ್ತು.
ಇದೇ ವೇಳೆ ಟೆಲಿಗ್ರಾಮ್ ಸಂಸ್ಥಾಪಕ ಪಾವೆಲ್ ಡುರೊವ್ ಕೇಂದ್ರ ಸರ್ಕಾರದ ಕ್ರಮವನ್ನು ತೀವ್ರವಾಗಿ ಟೀಕಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದ ನೈಜ ಅಪರಾಧಿಗಳನ್ನು ಪತ್ತೆಹಚ್ಚುವ ಬದಲು ದೇಶದ 15 ಕೋಟಿಗೂ ಹೆಚ್ಚು ಸಾಮಾನ್ಯ ಬಳಕೆದಾರರಿಗೆ ತೊಂದರೆ ಉಂಟುಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಟರ್ನೆಟ್ ಫ್ರೀಡಂ ಫೌಂಡೇಶನ್ (IFF) ಕೂಡ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ್ದು, ವಿಶೇಷವಾಗಿ ಜೂನ್ 30ರವರೆಗೆ ‘ಮೆಸೇಜ್ ಎಡಿಟಿಂಗ್’ ಸೌಲಭ್ಯವನ್ನು ನಿರ್ಬಂಧಿಸಿರುವ ಕ್ರಮಕ್ಕೆ ಸ್ಪಷ್ಟ ಕಾನೂನು ಆಧಾರವಿಲ್ಲ ಎಂದು ಹೇಳಿದೆ. ಪರೀಕ್ಷಾ ಅಕ್ರಮವನ್ನು ತಡೆಯಲು ತೆಗೆದುಕೊಂಡ ಕ್ರಮವು ಬಳಕೆದಾರರ ಹಕ್ಕುಗಳ ಮೇಲೆ ಅನಗತ್ಯ ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯವನ್ನೂ ಸಂಸ್ಥೆ ವ್ಯಕ್ತಪಡಿಸಿದೆ.




