
ನವದೆಹಲಿ: ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಹಾಗೂ ಕೆಮ್ಮಿನ ಸಿರಪ್ಗಳ ದುರುಪಯೋಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಹೊಸ ನಿಯಮ ಜಾರಿಗೊಳಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಇನ್ನು ಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕೆಮ್ಮು, ನೆಗಡಿ ಹಾಗೂ ಜ್ವರದ ಸಿರಪ್ಗಳನ್ನು ಔಷಧ ಅಂಗಡಿಗಳಲ್ಲಿ ಖರೀದಿಸಲು ಸಾಧ್ಯವಾಗುವುದಿಲ್ಲ. 1945ರ ಔಷಧ ನಿಯಮಾವಳಿಯಲ್ಲಿ ಇದ್ದ ಕೆಲವು ವಿನಾಯಿತಿಗಳನ್ನು ಸರ್ಕಾರ ರದ್ದುಪಡಿಸಿದ್ದು, ಈ ಹಿಂದೆ 1,000ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ನಿಯಮಗಳಿಂದ ವಿನಾಯಿತಿ ಪಡೆದು ಸಿರಪ್ ಮಾರಾಟ ಮಾಡಲಾಗುತ್ತಿತ್ತು. ಆದರೆ ಹೊಸ ನಿಯಮದ ಬಳಿಕ ಸಣ್ಣ ಹಳ್ಳಿಗಳಲ್ಲಿಯೂ ಪರವಾನಗಿ ಇಲ್ಲದೆ ಸಿರಪ್ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಇನ್ನು ಮುಂದೆ ಎಲ್ಲಾ ರೀತಿಯ ಕೆಮ್ಮಿನ ಸಿರಪ್ಗಳನ್ನು 1940ರ ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಗಿ ಪಡೆದ ಔಷಧಾಲಯಗಳ ಮೂಲಕ ಮಾತ್ರ ಮಾರಾಟ ಮಾಡಬೇಕಾಗಿದ್ದು, ಗ್ರಾಹಕರು ವೈದ್ಯರ ಚೀಟಿಯನ್ನು ತೋರಿಸುವುದು ಕಡ್ಡಾಯವಾಗಿದೆ. ದೇಶದಾದ್ಯಂತ ಕೆಲವು ಕಡೆಗಳಲ್ಲಿ ಸಿರಪ್ಗಳ ದುರುಪಯೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಔಷಧ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದ್ದು, ನಿಯಮ ಉಲ್ಲಂಘಿಸುವ ತಯಾರಕರು ಹಾಗೂ ವಿತರಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.




