
ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಶಿಗೆಲ್ಲೋಸಿಸ್ (Shigellosis) ಸೋಂಕು ಆತಂಕ ಸೃಷ್ಟಿಸಿದ್ದು, ಕೋಝಿಕ್ಕೋಡ್ನಲ್ಲಿ ನಾಲ್ಕು ವರ್ಷದ ಬಾಲಕಿ ಸೋಂಕಿಗೆ ಬಲಿಯಾಗಿದ್ದಾಳೆ. ವಯನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಗಡಿ ಜಿಲ್ಲೆಗಳು ಸೇರಿದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿ ತೀವ್ರ ನಿಗಾ ವಹಿಸಿದೆ. ಶಿಗೆಲ್ಲಾ ಎಂಬುದು ವೈರಸ್ ಅಲ್ಲ, ಅತ್ಯಂತ ಸಾಂಕ್ರಾಮಿಕ ಬ್ಯಾಕ್ಟೀರಿಯಾ ಸೋಂಕಾಗಿದ್ದು, ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಕರುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಲುಷಿತ ನೀರು, ಕಲುಷಿತ ಆಹಾರ ಸೇವನೆ ಹಾಗೂ ಶೌಚಾಲಯ ಬಳಕೆಯ ಬಳಿಕ ಕೈಗಳನ್ನು ಸರಿಯಾಗಿ ತೊಳೆಯದಿರುವುದರಿಂದ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವಿಶೇಷವಾಗಿ ಐದು ವರ್ಷದೊಳಗಿನ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸೋಂಕಿನ ಅಪಾಯ ಹೆಚ್ಚಿದ್ದು, ಆರಂಭಿಕ ಹಂತದಲ್ಲೇ ನಿರ್ಲಕ್ಷ್ಯ ವಹಿಸಿದರೆ ಜೀವಕ್ಕೆ ಅಪಾಯ ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಸೋಂಕಿನ ಪ್ರಮುಖ ಲಕ್ಷಣಗಳೆಂದರೆ ತೀವ್ರ ಜ್ವರ, ಆಯಾಸ, ಹೊಟ್ಟೆ ನೋವು, ಹೊಟ್ಟೆ ಸೆಳೆತ, ನಿರಂತರ ವಾಂತಿ, ರಕ್ತ ಮಿಶ್ರಿತ ಅತಿಸಾರ ಹಾಗೂ ತೀವ್ರ ನಿರ್ಜಲೀಕರಣ. ಸೋಂಕು ತಡೆಗಟ್ಟಲು ಮಕ್ಕಳಿಗೆ ಕಲುಷಿತ ನೀರು ಮತ್ತು ತೆರೆದಿಟ್ಟ ಆಹಾರ ನೀಡದಂತೆ, ಆಹಾರ ಸೇವನೆಗೂ ಮುನ್ನ ಹಾಗೂ ಶೌಚಾಲಯ ಬಳಕೆಯ ಬಳಿಕ ಸಾಬೂನು ಬಳಸಿ ಕನಿಷ್ಠ 20 ಸೆಕೆಂಡುಗಳ ಕಾಲ ಕೈ ತೊಳೆಯುವಂತೆ, ಸುರಕ್ಷಿತವಾಗಿ ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯುವಂತೆ, ಹಸಿ ಅಥವಾ ಸರಿಯಾಗಿ ಬೇಯಿಸದ ಆಹಾರ ಸೇವನೆ ತಪ್ಪಿಸುವಂತೆ ಮತ್ತು ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದ್ದು, ಗಡಿ ಭಾಗಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಪರಿಸ್ಥಿತಿಯ ಮೇಲೆ ನಿಗಾ ವಹಿಸಲಾಗುತ್ತಿದ್ದು, ತಜ್ಞರೊಂದಿಗೆ ಚರ್ಚಿಸಿ ರಾಜ್ಯದಲ್ಲಿ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.




