
ಚಿಕ್ಕಮಗಳೂರು: ಕೇರಳ ಲಾಟರಿಯಲ್ಲಿ ₹8 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ ಒಟ್ಟು ₹2,34,200 ಹಣ ಪಡೆದು ವಂಚಿಸಿರುವ ಘಟನೆ ಸೈಬರ್ ಕ್ರೈಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೀಮಾ ಬಾನು ಎಂಬುವವರಿಗೆ ಜುಲೈ 20ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ, ತಾನು ಕೇರಳ ಲಾಟರಿ ಕಡೆಯಿಂದ ಮಾತನಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ಬಳಿಕ ವಾಟ್ಸ್ಆಪ್ ಮೂಲಕ ಲಾಟರಿ ಟಿಕೆಟ್ಗಳ ಮಾಹಿತಿಯನ್ನು ಕಳುಹಿಸಿದ್ದು, ಮಹಿಳೆ KL336699 ಸಂಖ್ಯೆಯ ಲಾಟರಿ ಟಿಕೆಟ್ ಆಯ್ಕೆ ಮಾಡಿದ್ದಾರೆ. ನಂತರ ಟಿಕೆಟ್ ಚಾರ್ಜ್ ಎಂದು ₹99 ಪಾವತಿಸುವಂತೆ ಸೂಚಿಸಿದ್ದು, ಮಹಿಳೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಅದೇ ದಿನ ಲಾಟರಿ ಡ್ರಾ ನಡೆದಿದ್ದು, ತಮಗೆ ₹8 ಲಕ್ಷ ಬಹುಮಾನ ಬಂದಿದೆ ಎಂದು ನಂಬಿಸುವ ರೀತಿಯಲ್ಲಿ ಲಿಂಕ್ ಕಳುಹಿಸಲಾಗಿದೆ. ಲಿಂಕ್ನಲ್ಲಿ ₹8 ಲಕ್ಷ ಲಾಟರಿ ಗೆದ್ದಿರುವುದಾಗಿ ತೋರಿಸಲಾಗಿದ್ದು, ಇದನ್ನು ನಂಬಿದ ಮಹಿಳೆಯಿಂದ ಬ್ಯಾಂಕ್ ಖಾತೆಯ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ. ಬಳಿಕ ಲಾಟರಿ ಹಣ ಪಡೆಯಲು ಪ್ರೊಸೆಸಿಂಗ್ ಚಾರ್ಜ್, ಜಿಎಸ್ಟಿ, ಟಿಡಿಎಸ್, ಎನ್ಒಸಿ ಹಾಗೂ ಆರ್ಬಿಐ ಚಾರ್ಜ್ಗಳ ಹೆಸರಿನಲ್ಲಿ ಹಂತ ಹಂತವಾಗಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಜುಲೈ 20ರಿಂದ 29ರವರೆಗೆ ವಿವಿಧ ಹಂತಗಳಲ್ಲಿ ಒಟ್ಟು ₹2,34,200 ಹಣವನ್ನು ಫೋನ್ ಪೇ ಮೂಲಕ ಆರೋಪಿಗಳು ನೀಡಿದ ಸ್ಕ್ಯಾನರ್ಗಳಿಗೆ ವರ್ಗಾವಣೆ ಮಾಡಿದ್ದಾರೆ. ಆದರೂ ಭರವಸೆ ನೀಡಿದಂತೆ ಯಾವುದೇ ಲಾಟರಿ ಹಣ ಖಾತೆಗೆ ಜಮೆಯಾಗಿಲ್ಲ. ಬದಲಾಗಿ ಮತ್ತೆ ₹1 ಲಕ್ಷ ಹಣ ಹಾಕುವಂತೆ ಆರೋಪಿಗಳು ಒತ್ತಾಯಿಸಿದಾಗ ಮಹಿಳೆಗೆ ಅನುಮಾನ ಮೂಡಿದೆ. ಕುಟುಂಬದವರೊಂದಿಗೆ ವಿಚಾರಿಸಿದ ಬಳಿಕ ತಾನು ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ತಕ್ಷಣವೇ ಸೈಬರ್ ಹೆಲ್ಪ್ಲೈನ್ 1930ಕ್ಕೆ ಕರೆ ಮಾಡಿ, ಸ್ವೀಕೃತಿ ಸಂಖ್ಯೆ 31608260135664ರಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.



