
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ನಾಳೆ ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೆ ಮದ್ಯ ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಹೈಕೋರ್ಟ್ ಆದೇಶದಂತೆ ನಗರದ ಐ.ಡಿ.ಎಸ್.ಜಿ. ಸರ್ಕಾರಿ ಕಾಲೇಜಿನಲ್ಲಿ ಮರು ಎಣಿಕೆ ನಡೆಯಲಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿತೇಂದ್ರ ಕುಮಾರ್ ದಯಾಮ ಅವರ ನೇತೃತ್ವದಲ್ಲಿ ಕಟ್ಟುನಿಟ್ಟಿನ ಭದ್ರತೆ ಜಾರಿಗೊಳಿಸಲಾಗಿದೆ. ಎಣಿಕೆ ಕೇಂದ್ರದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬಾರ್, ರೆಸ್ಟೋರೆಂಟ್ ಹಾಗೂ ವೈನ್ ಶಾಪ್ಗಳನ್ನು ಬಂದ್ ಮಾಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಾಗಿದ್ದು, ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸೈಬರ್ ಕಫೆ ಹಾಗೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದ್ದು, ಯಾವುದೇ ಅಭ್ಯರ್ಥಿ ಗೆದ್ದರೂ ವಿಜಯೋತ್ಸವ, ಘೋಷಣೆ ಅಥವಾ ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಕೇವಲ ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಎಣಿಕೆ ಕೇಂದ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಒಟ್ಟಿನಲ್ಲಿ ಮರು ಎಣಿಕೆ ಹಿನ್ನೆಲೆಯಲ್ಲಿ ಇಡೀ ಪ್ರದೇಶವನ್ನು ಪೊಲೀಸ್ ಕೋಟೆಯನ್ನಾಗಿ ಪರಿವರ್ತಿಸಲಾಗಿದೆ.





