
ಬೆಂಗಳೂರು: ಸುಪ್ರೀಂ ಕೋರ್ಟ್ನ ನಕಲಿ ಆದೇಶ ಪತ್ರವನ್ನು ಸೃಷ್ಟಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿ ಬಿಡುಗಡೆಯಾಗಿ ಪರಾರಿಯಾಗಿದ್ದ ಅಚ್ಚರಿಯ ಪ್ರಕರಣವು ಎಂಟು ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. 2001ರಲ್ಲಿ ನಡೆದ ಅಪಹರಣ ಹಾಗೂ ಸುಲಿಗೆ ಪ್ರಕರಣದಲ್ಲಿ ಶಂಕರ್ ವಿರುದ್ಧ ಐಪಿಸಿ ಸೆಕ್ಷನ್ 364ಎ ಮತ್ತು 120ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಿತ್ತು. ಜೊತೆಗೆ 5,000 ರೂ. ದಂಡವನ್ನೂ ವಿಧಿಸಲಾಗಿತ್ತು. 2018ರಲ್ಲಿ ಜೈಲು ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಲಾಗಿದ್ದ ಕ್ರಿಮಿನಲ್ ಮೇಲ್ಮನವಿಗೆ ಸಂಬಂಧಿಸಿದಂತೆ ಶಂಕರ್ನ ಬಿಡುಗಡೆಗೆ ಆದೇಶ ನೀಡಲಾಗಿದೆ ಎಂಬ ಪತ್ರ ಬಂದಿದ್ದು, ಅದನ್ನು ನಿಜವೆಂದು ನಂಬಿದ ಅಧಿಕಾರಿಗಳು ಡಿಸೆಂಬರ್ ಅಂತ್ಯದಲ್ಲಿ ಆತನನ್ನು ಬಿಡುಗಡೆ ಮಾಡಿದ್ದರು. ಆದರೆ ಇತ್ತೀಚೆಗೆ ಜೈಲು ಇಲಾಖೆಯ ಮಹಾನಿರ್ದೇಶಕರಿಗೆ ಬಂದ ದೂರಿನ ಪತ್ರದಲ್ಲಿ ಶಂಕರ್ ನಕಲಿ ದಾಖಲೆಗಳ ಆಧಾರದಲ್ಲಿ ಜೈಲಿನಿಂದ ಪರಾರಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜೈಲು ಇಲಾಖೆ ಆಂತರಿಕ ತನಿಖೆ ನಡೆಸಿದಾಗ, ಸುಪ್ರೀಂ ಕೋರ್ಟ್ನಿಂದ ಯಾವುದೇ ಬಿಡುಗಡೆ ಆದೇಶ ಹೊರಬಿದ್ದಿರಲಿಲ್ಲ ಎಂಬುದು ಪತ್ತೆಯಾಗಿದೆ. ನಕಲಿ ದಾಖಲೆಗಳ ಮೂಲಕ ಜೈಲಿನಿಂದ ತಪ್ಪಿಸಿಕೊಂಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಶಂಕರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪರಾರಿಯಾಗಿರುವ ಆತನ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.




