
ನರಸಿಂಹರಾಜಪುರ: ನರಸಿಂಹರಾಜಪುರದಲ್ಲಿ ದೇವಸ್ಥಾನದ ಸಮೀಪದ ಮರದ ಪೊದೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ಬಿಟ್ಟುಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಮಗುವಿನ ತಾಯಿಯನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣೆಯ ವೇಳೆ ಮಹಿಳೆ ಕನ್ನಂಗಿ ನಿವಾಸಿಯಾದ ಯುವಕನೊಬ್ಬ ಆಕೆಯ ಮನೆಯವರಿಗೂ ಪರಿಚಿತನಾಗಿದ್ದು, ಇಬ್ಬರ ವಿವಾಹಕ್ಕೆ ಸಮ್ಮತಿ ದೊರೆತಿದ್ದರಿಂದ ಸಲಗೆಯಿಂದ ನಡೆದುಕೊಳ್ಳುತ್ತಿದ್ದೆ. ಆಗಾಗ ಬರುತ್ತಿದ್ದ ಆತನೊಂದಿಗೆ ಮದುವೆಯಾಗುವ ನಂಬಿಕೆಯಿಂದಾಗಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದೆ, ಇದರ ಪರಿಣಾಮವಾಗಿ ತಾನು ಗರ್ಭಿಣಿಯಾಗಿದ್ದು, ಆ ನಂತರ ತಾನು ಗರ್ಭಿಣಿಯಾಗಿದ್ದ ವಿಷಯವನ್ನು ತಿಳಿಸಿದಾಗ ಯುವಕ ಉಡಾಫೆಯಾಗಿ ವರ್ತಿಸಿ ವಿಚಿತ್ರವಾಗಿ ನಡೆದುಕೊಂಡಿದ್ದಾನೆ ಎಂದು ಹೇಳಿದ್ದಾಳೆ. ಮೇ 18ರಂದು ಹೊಟ್ಟೆನೋವು ಕಾಣಿಸಿಕೊಂಡು ಹೆರಿಗೆ ಆಗಿ ಹೆಣ್ಣು ಮಗು ಜನಿಸಿದ ಬಳಿಕ ಮರ್ಯಾದೆಗೆ ಅಂಜಿ ದೇವಸ್ಥಾನದ ಬಳಿಯ ಮರದ ಪೊದೆಯಲ್ಲಿ ಮಗುವನ್ನು ಬುಟ್ಟಿಯಲ್ಲಿ ಇಟ್ಟು ಬಿಟ್ಟು ಬಂದಿದ್ದಾಗಿ ಮಹಿಳೆ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದ್ದು, ನಂಬಿಕೆ ದ್ರೋಹ ಮಾಡಿದ ಯುವಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಹಿಳೆ ಮನವಿ ಮಾಡಿಕೊಂಡಿದ್ದಾರೆ.



