
ಮೂಡಿಗೆರೆ: ಮೂಡಿಗೆರೆ ಕಾಂಗ್ರೆಸ್ನಲ್ಲಿ ಕಳೆದ 15 ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಒಳಜಗಳ ಮತ್ತೆ ಬೀದಿರಂಪವಾಗಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಅವರು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ ಜಿಲ್ಲಾ ಕಾಂಗ್ರೆಸ್ ಘಟಕದ ಗಮನಕ್ಕೆ ತರದೇ ವಜಾ ಕ್ರಮ ಕೈಗೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಅವರು ಆ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ. ಈಗಾಗಲೇ ಮೂಡಿಗೆರೆಯಲ್ಲಿ ಶಾಸಕಿ ನಯನಾ ಮೋಟಮ್ಮ ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರ ನಡುವೆ ಕೋಲ್ಡ್ ವಾರ್ ನಡೆಯುತ್ತಿದ್ದು, ಹಿರಿಯ ಕಾರ್ಯಕರ್ತರು ಶಾಸಕಿ ವಿರುದ್ಧ 16 ಅಂಶಗಳ ದೂರನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದರೆ, ಇದಕ್ಕೆ ಪ್ರತಿಯಾಗಿ ಕಿರಿಯ ಕಾರ್ಯಕರ್ತರು 13 ಅಂಶಗಳ ಮನವಿಪತ್ರದ ಮೂಲಕ ಶಾಸಕಿ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಪಕ್ಷದೊಳಗಿನ ಎರಡು ಬಣಗಳ ನಡುವಿನ ಭಿನ್ನಾಭಿಪ್ರಾಯ ಮತ್ತಷ್ಟು ತೀವ್ರಗೊಂಡಿದ್ದು, ಹೋಬಳಿ ಅಧ್ಯಕ್ಷರ ವಜಾ ಹಾಗೂ ಅದಕ್ಕೆ ಜಿಲ್ಲಾಧ್ಯಕ್ಷರು ತಡೆ ನೀಡಿರುವ ಬೆಳವಣಿಗೆ ಕಾಂಗ್ರೆಸ್ನ ಒಳಜಗಳಕ್ಕೆ ಹೊಸ ತಿರುವು ನೀಡಿದೆ. ಮೂಡಿಗೆರೆ ಕಾಂಗ್ರೆಸ್ನಲ್ಲಿ ಶಾಸಕರು, ಬ್ಲಾಕ್ ಹಾಗೂ ಜಿಲ್ಲಾ ನಾಯಕತ್ವ ಮತ್ತು ಕಾರ್ಯಕರ್ತರ ನಡುವಿನ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ರಂಗೇರಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ರಾಜ್ಯ ನಾಯಕತ್ವ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.




