
ಬೆಂಗಳೂರು: ಕರ್ನಾಟಕದಲ್ಲಿ ದೇಶದ ಮೊದಲ ಸರ್ಕಾರಿ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. BIECನಲ್ಲಿ ನಡೆದ Google I/O Connect 2026 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, AI ಇಂದು ಶಿಕ್ಷಣ, ಆರೋಗ್ಯ, ಕೃಷಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಕರ್ನಾಟಕವನ್ನು AI ಕ್ಷೇತ್ರದ ಜಾಗತಿಕ ಕೇಂದ್ರವನ್ನಾಗಿಸುವುದು ಸರ್ಕಾರದ ಗುರಿಯಾಗಿದೆ ಎಂದರು. ಶಿಕ್ಷಣ, ಆರೋಗ್ಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ AI ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ AI ಹಬ್ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ ಅವರು, ಸರ್ಕಾರಿ ಸೇವೆಗಳನ್ನು ಇನ್ನಷ್ಟು ಸುಲಭ, ವೇಗ ಮತ್ತು ಪರಿಣಾಮಕಾರಿಯಾಗಿ ನೀಡಲು AI ತಂತ್ರಜ್ಞಾನ ಬಳಸಲಾಗುವುದು, ಆರೋಗ್ಯ ಕ್ಷೇತ್ರದಲ್ಲಿ ರೋಗ ಪತ್ತೆ, ರೈತರಿಗೆ AI ಆಧಾರಿತ ಕೃಷಿ ಸಲಹೆ, ಸಣ್ಣ ಉದ್ಯಮಗಳಿಗೆ ತಂತ್ರಜ್ಞಾನ ನೆರವು ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು. ಜೊತೆಗೆ AI ಸ್ಟಾರ್ಟ್ಅಪ್ಗಳಿಗೆ ಸರ್ಕಾರದಿಂದ ಉತ್ತೇಜನ, ವಿದ್ಯಾರ್ಥಿಗಳಿಗೆ AI ಶಿಕ್ಷಣ ಮತ್ತು ಕೌಶಲ್ಯ ತರಬೇತಿ, Google ಜೊತೆ AI ಕ್ಷೇತ್ರದಲ್ಲಿ ಸಹಭಾಗಿತ್ವ ವಿಸ್ತರಣೆ, ಡೇಟಾ ಸೆಂಟರ್ಗಳ ಅಭಿವೃದ್ಧಿ, AI ಸಂಶೋಧನೆ ಹಾಗೂ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು. ಜವಾಬ್ದಾರಿಯುತ AI ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಲಿದ್ದು, ಬೆಂಗಳೂರು ವಿಶ್ವದ ಪ್ರಮುಖ AI ಕೇಂದ್ರವಾಗಿ ಬೆಳೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.




