
ಕಾರ್ಕಳ: ನಗರದ ಆರಾಮ್ ಇಂಡಸ್ಟ್ರೀಸ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮವನ್ನು ಸಡಗರದಿಂದ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಕಾಸರಗೋಡು ಸೇವಾಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ. ವಿಜಯಾಜಿಯವರು ರಕ್ಷಾಬಂಧನ ಹಬ್ಬದ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿದರು. ಪ್ರಪಂಚದ ಎಲ್ಲ ಮನುಷ್ಯ ಆತ್ಮರು ಒಬ್ಬ ಪರಮಾತ್ಮನ ಸಂತಾನರಾಗಿದ್ದು, ಪ್ರಸ್ತುತ ಸಮಾಜದಲ್ಲಿ ಮನುಷ್ಯತ್ವ ಹಾಗೂ ನೈತಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಕೊರತೆ ಕಂಡುಬರುತ್ತಿದೆ ಎಂದು ತಿಳಿಸಿದರು. ಇಂತಹ ಸಂದರ್ಭದಲ್ಲಿ ಪರಮಾತ್ಮನ ಅವತರಣೆಯಾಗಿದ್ದು, ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೀಡಲಾಗುವ ಉಚಿತ ರಾಜಯೋಗ ಶಿಕ್ಷಣದ ಮೂಲಕ ವಿಶ್ವ ನವ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳುವವರು ತಮ್ಮ ಜೀವನವನ್ನು ಶ್ರೇಷ್ಠಗೊಳಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಸೇವಾಕೇಂದ್ರದ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮಿಯವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಬಿ.ಕೆ. ಗಾಯತ್ರಿ, ಬಿ.ಕೆ. ಪ್ರಪುಲ್ಲ ಹಾಗೂ ಬಿ.ಕೆ. ಶಾಂತ ಅವರು ಈಶ್ವರೀಯ ಕಾಣಿಕೆ ನೀಡಿದರು. ಬಿ.ಕೆ. ವರದರಾಯ ಅವರು ಧನ್ಯವಾದಗಳನ್ನು ಅರ್ಪಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




