
ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶಾದ್ಯಂತ ಆಯೋಜಿಸಿರುವ ‘ಖೇಲೋ ಇಂಡಿಯಾ ಸಂವಾದ’ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ. ‘ಮೇರಾ ಯುವ ಭಾರತ್’ ಸಂಸ್ಥೆಯ ವತಿಯಿಂದ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದೇಶದ ಪ್ರತಿಯೊಂದು ಜಿಲ್ಲೆಯ ಆಯ್ದ ಎರಡು ಕಾಲೇಜುಗಳನ್ನು ವರ್ಚುವಲ್ ಮೂಲಕ ಸಂಪರ್ಕಿಸುವ ಮೂಲಕ ಲಕ್ಷಾಂತರ ಯುವಕರನ್ನು ಕಾರ್ಯಕ್ರಮದಲ್ಲಿ ಒಗ್ಗೂಡಿಸಲಾಗುತ್ತಿದೆ. ಯುವ ಸಂವಾದದಲ್ಲಿ ಪ್ರಮುಖವಾಗಿ ಮೂರು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. 2036ರ ಒಲಿಂಪಿಕ್ಸ್ ಅನ್ನು ಭಾರತದಲ್ಲಿ ಆಯೋಜಿಸುವ ಕನಸು ಹಾಗೂ ಅದರಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡುವಂತೆ ಯುವಕರಲ್ಲಿ ಕ್ರೀಡಾಸ್ಫೂರ್ತಿ ಬೆಳೆಸುವ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಇದರ ಜೊತೆಗೆ, 2047ರ ವೇಳೆಗೆ ಭಾರತವನ್ನು ವಿಕಸಿತ ಹಾಗೂ ಸದೃಢ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯುವ ನಾಯಕತ್ವದ ಪಾತ್ರದ ಬಗ್ಗೆಯೂ ಚರ್ಚೆ ನಡೆಯಲಿದೆ. ಇನ್ನು ಯುವಜನತೆ ಮಾದಕ ವ್ಯಸನಗಳಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಮತ್ತು ಕ್ರೀಡೆಗಳತ್ತ ಹೆಚ್ಚಿನ ಗಮನ ಹರಿಸಬೇಕು ಎಂಬ ಸಂದೇಶವನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿಯವರ ರಾಷ್ಟ್ರೀಯ ಭಾಷಣದ ಬಳಿಕ, ಪ್ರತಿ ಜಿಲ್ಲೆಯ ಕಾಲೇಜುಗಳಲ್ಲಿ ಸ್ಥಳೀಯ ಮಟ್ಟದ ಸಂವಾದಗಳು ನಡೆಯಲಿವೆ. ದೇಶಕ್ಕಾಗಿ ಪದಕ ಗೆದ್ದ ಕ್ರೀಡಾಪಟುಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ, ಕ್ರೀಡಾ ಕ್ಷೇತ್ರದಲ್ಲಿರುವ ಅವಕಾಶಗಳು ಮತ್ತು ಸವಾಲುಗಳ ಕುರಿತು ಯುವಕರಿಗೆ ಮಾರ್ಗದರ್ಶನ ನೀಡಲಿದ್ದಾರೆ.




