
ಚಿಕ್ಕಮಗಳೂರು: ಚಿಕ್ಕಮಗಳೂರಿನ ರಾಂಪುರದಲ್ಲಿ ಕಾಮಗಾರಿ ವೀಕ್ಷಣೆ ವೇಳೆ ಪರಿಷತ್ ಸದಸ್ಯ ಸಿ.ಟಿ. ರವಿ ಎದುರೇ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ಗಲಾಟೆ ನಡೆದಿದೆ. ರಾಂಪುರ–ಶಕ್ತಿ ನಗರ ಮಾರ್ಗದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿ ವಾಪಸ್ ಬರುತ್ತಿದ್ದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ‘ಗೋ ಬ್ಯಾಕ್’ ಘೋಷಣೆ ಕೂಗಿದ್ದು, ಇದಕ್ಕೆ ಪ್ರತಿಯಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಪರಸ್ಪರ ಘೋಷಣೆ ಕೂಗಿ ಕೈಕೈ ಮಿಲಾಯಿಸಿದ ಪರಿಣಾಮ ಸ್ಥಳದಲ್ಲಿ ಹೈಡ್ರಾಮಾ ಉಂಟಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸಿ.ಟಿ. ರವಿ ಸಮ್ಮುಖದಲ್ಲಿಯೇ ಕಾರ್ಯಕರ್ತರು ಗಲಾಟೆ ಮುಂದುವರಿಸಿದ್ದು, ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಸಿ.ಟಿ. ರವಿ ರಸ್ತೆ ಮಧ್ಯೆ ಧರಣಿ ಕುಳಿತ ಘಟನೆವೂ ನಡೆದಿದೆ. ಈ ಮಧ್ಯೆ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ವಾಗ್ದಾಳಿ ನಡೆಸಿ, ಇಂತಹ ಗೂಂಡಾಗಳನ್ನು ಎದುರಿಸಿಕೊಂಡೇ ನಾವು ಬಂದಿದ್ದೇವೆ, ನನ್ನ ಮೇಲೆ ಹಲ್ಲೆಯ ಪ್ರಯತ್ನವೂ ನಡೆದಿದೆ, ನಾನು ಹೆದರಿ ಓಡುವವನು ಅಲ್ಲ ಎಂದು ಕಿಡಿಕಾರಿದ್ದು, ಜೊತೆಗೆ ಕಾಮಗಾರಿ ಮತ್ತು ಅನುದಾನದ ವಿಚಾರದಲ್ಲಿಯೂ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ.



