ಕೊಪ್ಪ: ಪೊಲೀಸ್ ಇಲಾಖೆಗೆ ಸೇರಿದ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ ಅಕ್ರಮವಾಗಿ ಮರಗಳನ್ನು ಕಡಿದು ಸುಮಾರು 2 ಲಕ್ಷ ರೂ. ಮೌಲ್ಯದ ನಷ್ಟ ಉಂಟುಪಡಿಸಿರುವ ಆರೋಪದಡಿ ಮೂವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಉಪಾಧೀಕ್ಷಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿನಾಯಕ ಎಂ.ಪಿ. ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಹರಂದೂರು ಗ್ರಾಮದ ಸರ್ವೆ ನಂ.1474ರಲ್ಲಿ 4 ಎಕರೆ 20 ಗುಂಟೆ ವಿಸ್ತೀರ್ಣದ ಪೊಲೀಸ್ ಇಲಾಖೆಯ ಜಾಗದಲ್ಲಿರುವ ವಸತಿ ಗೃಹದಲ್ಲಿ ಸೋಮವಾರ ಸಂಜೆ ಸುಮಾರು 5 ಗಂಟೆಗೆ ಮರ ಕಡಿಯುವ ಶಬ್ದ ಕೇಳಿ ಸ್ಥಳಕ್ಕೆ ತೆರಳಿದಾಗ ಅನ್ಸರ್, ಅಶ್ರಫ್ ಹಾಗೂ ಕವೀಶ್ ಎಂಬವರು ಮಷಿನ್ ಹಾಗೂ ಕತ್ತಿಯ ಸಹಾಯದಿಂದ ಮರಗಳನ್ನು ಕಡಿದು ಕೆಎ-18-ಟಿಎ-5526 ಸಂಖ್ಯೆಯ ಟ್ರ್ಯಾಕ್ಟರ್ಗೆ ಲೋಡ್ ಮಾಡುತ್ತಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ಘಟನೆಯ ವಿಡಿಯೊ ಚಿತ್ರೀಕರಿಸಿ ವಿಚಾರಿಸಿದಾಗ, ಮರಗಳು ವಸತಿ ಗೃಹ ಹಾಗೂ ಕೆಇಬಿ ವಿದ್ಯುತ್ ಮಾರ್ಗದ ಮೇಲೆ ಬೀಳುವ ಸಾಧ್ಯತೆ ಇರುವುದರಿಂದ ಕೆಇಬಿ ಮತ್ತು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಮರಗಳನ್ನು ಕಡಿದು ಮಾರಾಟ ಮಾಡಲು ಸಿದ್ಧತೆ ನಡೆಸಿರುವುದಾಗಿ ಅನ್ಸರ್ ತಿಳಿಸಿದ್ದಾನೆ ಎನ್ನಲಾಗಿದೆ. ಇದೇ ವೇಳೆ ಪೊಲೀಸ್ ಸಿಬ್ಬಂದಿಗಳಾದ ಯುವರಾಜ್ ಹಾಗೂ ಸುರೇಶ್ ಸ್ಥಳಕ್ಕೆ ಆಗಮಿಸಿದ ಬಳಿಕ ಮರ ಕಡಿಯುವ ಕೆಲಸವನ್ನು ನಿಲ್ಲಿಸಲಾಗಿದ್ದು, ಪೊಲೀಸ್ ಇಲಾಖೆಗೆ ಸೇರಿದ ಜಾಗದಲ್ಲಿದ್ದ ಸುಮಾರು 30 ಮರಗಳನ್ನು ಅನುಮತಿ ಇಲ್ಲದೆ ಕಡಿದು ಕಳ್ಳತನ ಮಾಡುವ ಉದ್ದೇಶದಿಂದ ರಾಶಿ ಹಾಕಿರುವ ಆರೋಪದಡಿ ಅನ್ಸರ್, ಅಶ್ರಫ್ ಹಾಗೂ ಕವೀಶ್ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
