
ಚಾಮರಾಜನಗರ: ಚಾಮರಾಜನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ಮಾತನಾಡಿ, ಮಾತೃಭಾಷೆಯಲ್ಲಿನ ಶಿಕ್ಷಣವು ಮಾನವನ ವ್ಯಕ್ತಿತ್ವ ವಿಕಾಸಕ್ಕೆ ಪ್ರಮುಖ ಅಡಿಪಾಯವಾಗಿದ್ದು, ಮಾತೃಭಾಷಾ ಶಿಕ್ಷಣದಿಂದ ಚೈತನ್ಯಶಕ್ತಿ, ಸೃಜನಶೀಲತೆ ಹಾಗೂ ಚಿಂತನಾ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು. ಮಹಾತ್ಮ ಗಾಂಧೀಜಿ ವಿಶ್ವದ ಶಾಂತಿಪ್ರಿಯರಿಗೆ ಸ್ಫೂರ್ತಿಯಾಗಿದ್ದು, ಅವರ ಜನ್ಮದಿನವನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಘೋಷಿಸಿರುವುದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ದೇಶದ ಗಡಿ ರಕ್ಷಣೆ ಹಾಗೂ ಕೃಷಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯ ಮೂಲಕ ಸೈನಿಕರು ಹಾಗೂ ರೈತರಿಗೆ ರಾಷ್ಟ್ರೀಯ ಸ್ಫೂರ್ತಿ ತುಂಬಿದ ಮಹಾನ್ ನಾಯಕ ಎಂದು ಸ್ಮರಿಸಿದರು. ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗಮೂರ್ತಿ ಅವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಚರಿತ್ರೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಅಹಿಂಸಾ ತತ್ವ ಸಾರುವ ಹಾಗೂ ದೇಶಭಕ್ತಿ ಗೀತೆಗಳನ್ನು ಹಾಡಲಾಯಿತು. ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಗಾಂಧೀಜಿಯವರಿಗೆ ಪ್ರಿಯವಾಗಿದ್ದ ‘ಬಡವರ ಬಾದಾಮಿ’ ಎಂದೇ ಪ್ರಸಿದ್ಧವಾದ ಕಡ್ಲೆಕಾಯಿ ಬೀಜ ಹಾಗೂ ಗಾಂಧೀಜಿಯವರ ಕಿರುಪುಸ್ತಕವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಸರಸ್ವತಿ, ಜಯರಾಜ್, ಸಿದ್ದರಾಜು ಸೇರಿದಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.




