
ಬೆಂಗಳೂರು: ಬಿಡದಿ ಸಮೀಪದ ಕುರುಬರಕೇರನಹಳ್ಳಿಯ ಫಾರ್ಮ್ಹೌಸ್ನಲ್ಲಿ ಪರವಾನಗಿ ಇಲ್ಲದೆ ನಡೆಯುತ್ತಿದ್ದ ನಕಲಿ ಔಷಧಿಗಳ ಮರುಪ್ಯಾಕಿಂಗ್ ಮತ್ತು ಲೇಬಲಿಂಗ್ ಜಾಲವನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಔಷಧ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇತರ ರಾಜ್ಯಗಳಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತಂದು, ಅವುಗಳನ್ನು ಹೊಸ ಬಾಟಲಿಗಳಿಗೆ ತುಂಬಿ ಪ್ರತಿಷ್ಠಿತ ಬಹುರಾಷ್ಟ್ರೀಯ ಔಷಧ ಕಂಪನಿಗಳು ಹಾಗೂ ಆಮದು ಮಾಡಿದ ಬ್ರಾಂಡ್ಗಳ ಹೆಸರಿನಲ್ಲಿ ನಕಲಿ ಲೇಬಲ್ ಅಂಟಿಸಿ ಮಾರುಕಟ್ಟೆಗೆ ಮಾರಾಟ ಮಾಡಲು ಸಿದ್ಧಪಡಿಸಲಾಗುತ್ತಿತ್ತು ಎನ್ನಲಾಗಿದೆ. ದಾಳಿ ವೇಳೆ ಒಟ್ಟು ₹4,91,49,575 ಮೌಲ್ಯದ ಔಷಧಿಗಳು ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ವಿವಿಧ ಕಂಪನಿಗಳ ಹೆಸರಿನ ನಕಲಿ ಇಂಜೆಕ್ಷನ್ಗಳು ಮತ್ತು ಔಷಧಿಗಳು, ಬಾಟಲ್ಗಳು, ಬಾಕ್ಸ್ಗಳು, ಕ್ಯಾಪ್ಗಳು, ಸ್ಟಾಪರ್ಗಳು, ಲೇಬಲ್ಗಳು ಹಾಗೂ ಪ್ಯಾಕಿಂಗ್ ಸಾಮಗ್ರಿಗಳು ಸೇರಿವೆ. CEFIA VIGENT 2.5ನ 5,640 ಬಾಟಲಿಗಳು ಸುಮಾರು ₹3.38 ಕೋಟಿ, HIZLAMನ 1,531 ಬಾಟಲಿಗಳು ಸುಮಾರು ₹52.24 ಲಕ್ಷ, 30 ಬಾಕ್ಸ್ಗಳ ಅವಧಿ ಮೀರಿದ ಔಷಧಿಗಳು ಸುಮಾರು ₹35 ಲಕ್ಷ, XavitaZ Injectionನ 470 ಬಾಟಲಿಗಳು ₹27.49 ಲಕ್ಷ, EMBLAVEQನ 264 ಬಾಟಲಿಗಳು ₹20.59 ಲಕ್ಷ, Zavicefta Injectionನ 165 ಬಾಟಲಿಗಳು ₹5.45 ಲಕ್ಷ, TIGYNT ಹಾಗೂ Tigynet Injection ಸೇರಿದಂತೆ ಹಲವು ಔಷಧಿಗಳು, Aztreo Injection, Trezam Injection ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಯಾವುದೇ ಅಧಿಕೃತ ಲೈಸೆನ್ಸ್ ಇಲ್ಲದೆ ಔಷಧಿಗಳ ಪ್ಯಾಕಿಂಗ್ ಮತ್ತು ಲೇಬಲಿಂಗ್ ನಡೆಸಲಾಗುತ್ತಿದ್ದು, ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ಔಷಧಿಗಳಿಗೆ ಬ್ರ್ಯಾಂಡ್ ರೂಪ ನೀಡಲಾಗುತ್ತಿತ್ತು ಎನ್ನಲಾಗಿದೆ. ಕೆಲವು ಔಷಧಿಗಳು ಅವಧಿ ಮೀರಿರುವುದು ಕೂಡ ಪತ್ತೆಯಾಗಿದ್ದು, ವಿಶೇಷವಾಗಿ ಕ್ಯಾನ್ಸರ್, ಕಿಡ್ನಿ ಹಾಗೂ ಐಸಿಯುನಲ್ಲಿ ಬಳಸುವ ದುಬಾರಿ ಔಷಧಿಗಳನ್ನೇ ನಕಲು ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ನಕಲಿ ಹಾಗೂ ಅವಧಿ ಮೀರಿದ ಔಷಧಿಗಳ ಬಳಕೆ ಸಾರ್ವಜನಿಕರ ಆರೋಗ್ಯ ಮತ್ತು ಜೀವಕ್ಕೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ವಶಪಡಿಸಿಕೊಂಡ ಔಷಧಿಗಳ ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ರಾಸಾಯನಿಕ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಬಂಧಿತ ಬ್ಯಾಚ್ಗಳ ಮಾರಾಟ ಮತ್ತು ವಿತರಣೆಯನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಈ ಔಷಧಿಗಳು ಈಗಾಗಲೇ ಆಸ್ಪತ್ರೆಗಳು ಅಥವಾ ಮೆಡಿಕಲ್ ಸ್ಟೋರ್ಗಳ ಮೂಲಕ ಮಾರುಕಟ್ಟೆಗೆ ತಲುಪಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್, ಬೇರೆ ರಾಜ್ಯಗಳು ಹಾಗೂ ರಾಷ್ಟ್ರಗಳಿಂದ ಕಡಿಮೆ ಬೆಲೆಗೆ ಔಷಧಿಗಳನ್ನು ತಂದು ಇಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಲೇಬಲ್ಗಳನ್ನು ಹಾಕಲಾಗಿದೆ ಹಾಗೂ ಐಸಿಯುನಲ್ಲಿ ಬಳಸುವ ಔಷಧಿಗಳನ್ನೂ ನಕಲು ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು. ಈ ಔಷಧಿಗಳು ಯಾವೆಲ್ಲಾ ಆಸ್ಪತ್ರೆಗಳಿಗೆ ತಲುಪಿವೆ ಎಂಬುದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಜನರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಇಲ್ಲವಾಗಿದ್ದು, ನಕಲಿ ಔಷಧ ದಂಧೆ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಿದೆ ಎಂದು ತಿಳಿಸಿದ್ದಾರೆ.



