ಚಿಕ್ಕಮಗಳೂರು: ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಲಕ್ಷ್ಮಿಪುರ ಗ್ರಾಮದ ಮಂಜುನಾಥ್ (60) ಅವರು ಉಸಿರಾಟದ ತೊಂದರೆಯಿಂದ ಜಿಲ್ಲಾಸ್ಪತ್ರೆಗೆ ದಾಖಲಾದರೂ, ತುರ್ತು ಘಟಕದಲ್ಲಿ ಸ್ಟ್ರೆಚ್ಚರ್ ಮೇಲೆ ತೀವ್ರವಾಗಿ ನರಳುತ್ತಿದ್ದಾಗಲೂ ಸೂಕ್ತ ಚಿಕಿತ್ಸೆ ನೀಡಲಾಗಲಿಲ್ಲ ಎನ್ನಲಾಗಿದೆ. ಕರ್ತವ್ಯದಲ್ಲಿದ್ದ ವೈದ್ಯರು ಮೊಬೈಲ್ನಲ್ಲಿ ಮಾತನಾಡುತ್ತಾ ನಿರ್ಲಕ್ಷ್ಯ ವಹಿಸಿದ್ದಾರೆಯೆಂಬ ಆರೋಪವೂ ಕೇಳಿಬಂದಿದೆ. ಆಸ್ಪತ್ರೆ ಸೇರಿ ಸುಮಾರು ಒಂದು ಗಂಟೆ ಕಳೆದ ಬಳಿಕ ತಡವಾಗಿ ಐಸಿಯುವಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದರೂ ಫಲಕಾರಿಯಾಗದೆ ಮಂಜುನಾಥ್ ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದ ವಿರುದ್ಧ ಮೃತರ ಕುಟುಂಬಸ್ಥರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
