
ಕಳಸ: ಮೊಬೈಲ್ಗೆ ಎಪಿಕೆ ಫೈಲ್ ಡೌನ್ಲೋಡ್ ಆಗಿರುವುದನ್ನು ದುರುಪಯೋಗಪಡಿಸಿಕೊಂಡು ಬ್ಯಾಂಕ್ ಖಾತೆಯಿಂದ ₹1.27 ಲಕ್ಷ ಹಣ ವರ್ಗಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಕಳಸ ಮೂಲದ 69 ವರ್ಷದ ಕರುಣಾಕರ ಎಂ.ಸಿ. ಅವರು ಕರ್ನಾಟಕ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಎರಡೂ ಖಾತೆಗಳಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದ್ದರು. ಆಗಸ್ಟ್ 17ರಂದು ಕರ್ನಾಟಕ ಬ್ಯಾಂಕ್ ಖಾತೆಯಿಂದ ₹99,999 ಹಣ ಡೆಬಿಟ್ ಆಗಿರುವ ಬಗ್ಗೆ ಅವರಿಗೆ ಸಂದೇಶ ಬಂದಿದೆ. ತಕ್ಷಣ ಬ್ಯಾಂಕ್ಗೆ ಕರೆ ಮಾಡಿ ಖಾತೆಯನ್ನು ಡೆಬಿಟ್ ಫ್ರೀಜ್ ಮಾಡಿಸಿದ ಅವರು, ಬಳಿಕ ಬ್ಯಾಂಕ್ಗೆ ತೆರಳಿ ವಿಚಾರಿಸಿದ್ದಾರೆ. ನಂತರ ಆಗಸ್ಟ್ 19ರಂದು ಕೆನರಾ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ, ಆಗಸ್ಟ್ 18ರಂದು ಮತ್ತೊಂದು ₹28,000 ಹಣವೂ ತಮ್ಮ ಗಮನಕ್ಕೆ ಬಾರದೆ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ತಮ್ಮ ಮೊಬೈಲ್ಗೆ ಯಾವುದೋ APK ಫೈಲ್ ಡೌನ್ಲೋಡ್ ಆಗಿರುವುದರಿಂದ ಅಥವಾ ಅಪರಿಚಿತ ವ್ಯಕ್ತಿಗಳು ತಮ್ಮ ಗಮನಕ್ಕೆ ಬಾರದಂತೆ ಎರಡೂ ಖಾತೆಗಳಿಂದ ಒಟ್ಟು ₹1,27,999 ಹಣವನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ಎಂದು ಕರುಣಾಕರ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದು, ಕಳಸ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಕೇಸ್ ನಂ. 45/2026 ದಾಖಲಿಸಲಾಗಿದೆ. ಪ್ರಕರಣವನ್ನು ಐಟಿ ಕಾಯ್ದೆಯ ಕಲಂ 66(C), 66(D) ಹಾಗೂ BNS ಕಲಂ 318(4) ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.




