ಮೂಡಿಗೆರೆ : ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಲಕ್ಷಾಂತರ ಮೌಲ್ಯದ ಕಾಫಿ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 3.50 ಲಕ್ಷ ರೂ. ಮೌಲ್ಯದ ಅರೆಬಿಕಾ ಪಾರ್ಚ್ಮೆಂಟ್ ಹಾಗೂ ಚೆರ್ರಿ ಕಾಫಿ ಬೀಜಗಳು ಮತ್ತು ಕಳ್ಳತನಕ್ಕೆ ಬಳಸಿದ್ದ ಸುಮಾರು 10 ಲಕ್ಷ ರೂ. ಮೌಲ್ಯದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗೋಣಿಬೀಡು ಸಮೀಪದ ಕಸ್ಕೇಬೈಲ್ ಗ್ರಾಮದ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ ರಂಗಸ್ವಾಮಿ ಅವರ ಎಸ್ಟೇಟ್ನ ಗೋಡಾನ್ನಿಂದ ಮೇ ಹಾಗೂ ನವೆಂಬರ್ 2025ರಲ್ಲಿ ಕಾಫಿ ಕಳ್ಳತನವಾಗಿದ್ದು, ತನಿಖೆಯಲ್ಲಿ ಎಸ್ಟೇಟ್ನಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬನೇ ಇತರರೊಂದಿಗೆ ಸೇರಿ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಈ ಕಾರ್ಯಾಚರಣೆ ಚಿಕ್ಕಮಗಳೂರು ಉಪವಿಭಾಗ ಡಿ.ವೈ.ಎಸ್.ಪಿ ನಾಗರಾಜ್ ಕೆ.ಆರ್. ಅವರ ನೇತೃತ್ವದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್ಪೆಕ್ಟರ್ ರಾಜಶೇಖರ್, ಗೋಣಿಬೀಡು ಪಿಎಸ್ಐ ಹರ್ಷಗೌಡ, ಕ್ರೈಂ ಬ್ರಾಂಚ್ ಪಿಎಸ್ಐ ಹೇಮಾ ಹಾಗೂ ಸಿಬ್ಬಂದಿವರ್ಗದವರಿಂದ ನಡೆದಿದ್ದು, ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಪೊಲೀಸ್ ತಂಡಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದ್ದು, ಕಾಫಿ ತೋಟ ಹಾಗೂ ಗೋಡಾನ್ಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
