ಬೆಂಗಳೂರು: ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬಿಡದಿ ಟೌನ್ಶಿಪ್ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಗ್ರೇಟರ್ ಬೆಂಗಳೂರು ಅಥಾರಿಟಿ (GBDA) ವ್ಯಾಪ್ತಿಯಲ್ಲಿ ಮಹತ್ವಾಕಾಂಕ್ಷೆಯ ಬಿಡದಿ ಟೌನ್ಶಿಪ್ ಯೋಜನೆಯನ್ನು ಉತ್ತಮ ರಸ್ತೆಗಳು, ಮೆಟ್ರೋ ಸೌಲಭ್ಯ, ಕ್ರೀಡಾಂಗಣ, ವಸತಿ ಪ್ರದೇಶಗಳು ಹಾಗೂ ಉದ್ಯಾನವನಗಳನ್ನು ಒಳಗೊಂಡ ಸಮಗ್ರ AI ಸಿಟಿಯಾಗಿ ರೂಪಿಸುವ ಉದ್ದೇಶವಿದೆ ಎಂದು ಅವರು ಹೇಳಿದ್ದಾರೆ. ಈ ಯೋಜನೆಯ ಪ್ರಮುಖ ಉದ್ದೇಶ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ರೈತಾಪಿ ಜನರಿಗೆ ಉತ್ತಮ ಬದುಕು ಕಲ್ಪಿಸುವುದು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೊಸ ರೂಪ ನೀಡುವುದಾಗಿದೆ. ಯೋಜನೆಗಾಗಿ ಜಮೀನು ನೀಡುವ ರೈತರಿಗೆ ಸರ್ಕಾರ ಉತ್ತಮ ಬೆಲೆ ನೀಡಲು ಬದ್ಧವಾಗಿದ್ದು, ಹಿಂದಿನ ಸರ್ಕಾರ ಎಕರೆಗೆ ₹25 ಲಕ್ಷ ನಿಗದಿಪಡಿಸಿತ್ತು, ಆದರೆ ಪ್ರಸ್ತುತ ಸರ್ಕಾರ ಪ್ರತಿ ಎಕರೆಗೆ ₹3 ಕೋಟಿಗೂ ಹೆಚ್ಚು ಪರಿಹಾರ ನೀಡಲು ನಿರ್ಧರಿಸಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಹಣದ ಬದಲಿಗೆ ಜಮೀನು ಪಡೆಯಲು ಇಚ್ಛಿಸುವ ರೈತರಿಗೆ ಶೇಕಡಾ 50ರಷ್ಟು ಅಭಿವೃದ್ಧಿಪಡಿಸಿದ ಜಾಗವನ್ನು ನೀಡಲು ಕೂಡ ಸರ್ಕಾರ ತೀರ್ಮಾನಿಸಿದೆ. ಇದೇ ವೇಳೆ, ಬಿಡದಿ ಟೌನ್ಶಿಪ್ ಯೋಜನೆಗೆ ಜಮೀನು ನೀಡಲು ಇಚ್ಛಿಸದ ರೈತರ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಹಿಂದಿನ ಸರ್ಕಾರ ಜಾರಿಗೊಳಿಸಿದ್ದ ರೆಡ್ಜೋನ್ ಆದೇಶವನ್ನೇ ಮುಂದುವರಿಸಲಾಗುವುದು ಎಂದು ತಿಳಿಸಿದ ಅವರು, ಅಭಿವೃದ್ಧಿಯನ್ನು ಬಯಸುವವರು ಸರ್ಕಾರದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
