
ಬೆಂಗಳೂರು: ವೈವಾಹಿಕ ವೇದಿಕೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದ ಮಹಿಳೆಯೊಬ್ಬರಿಗೆ ಸ್ಕಾಟ್ಲೆಂಡ್ನಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ಡಾ. ವಿಹಾನ್ ಮಿಶ್ರಾ ಎಂಬಾತ ಸಂಪರ್ಕಿಸಿ, ಹಲವು ವಾರಗಳ ಕಾಲ ಪರಿಚಯ ಮತ್ತು ಸಂಭಾಷಣೆ ನಡೆಸಿ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಕುಟುಂಬದ ಒಪ್ಪಿಗೆ ಪಡೆದು ಶೀಘ್ರದಲ್ಲೇ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆತ ಭಾರತಕ್ಕೆ ಬರುತ್ತಿರುವುದಾಗಿ ತಿಳಿಸಿದ್ದಾನೆ. ಬಳಿಕ ದೆಹಲಿಗೆ ಬಂದಿರುವುದಾಗಿ ಹೇಳಿ, ತಾನು ಬ್ರಿಟಿಷ್ ಪ್ರಜೆಯಾಗಿರುವುದರಿಂದ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ನಾಟಕವಾಡಿದ್ದಾನೆ. ನಂತರ ನೇಹಾರಾಣಿ ಎಂಬಾಕೆ ತಾನು ವಲಸೆ ಅಧಿಕಾರಿ ಎಂದು ಕರೆ ಮಾಡಿ, ಮಿಶ್ರಾ ಬಳಿ ಇರುವ ಚಿನ್ನ ಹಾಗೂ ಬ್ರಿಟಿಷ್ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಲು ನೋಂದಣಿ, ಕ್ಲಿಯರೆನ್ಸ್ ಹಾಗೂ ಸಂಸ್ಕರಣಾ ಶುಲ್ಕಗಳ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದಾಳೆ. ಇದನ್ನು ನಂಬಿದ ಮಹಿಳೆ ಎರಡು ಬ್ಯಾಂಕ್ ಖಾತೆಗಳಿಗೆ ಒಟ್ಟು 23.5 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ವರನೆಂದು ಹೇಳಿಕೊಂಡ ವ್ಯಕ್ತಿಯ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ನೀಡಿದ್ದ ದೂರವಾಣಿ ಸಂಖ್ಯೆಯೂ ಕಾರ್ಯನಿರ್ವಹಿಸದಿರುವುದನ್ನು ಗಮನಿಸಿದ ಮಹಿಳೆ ತಾನು ವಂಚನೆಗೆ ಒಳಗಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




