
ಕರ್ನಾಟಕ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ತಾಕೀತು ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗುತ್ತಿದೆ. ಈಗಾಗಲೇ ಪ್ರಮಾಣವಚನಕ್ಕೆ ಮುಹೂರ್ತ ನಿಗದಿಯಾಗಿದ್ದು, ಈ ಶುಕ್ರವಾರವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಶೇಷವಾಗಿ ಆಹ್ವಾನಿಸುವ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ವಹಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕಾಗಿ ಅವರು ದೆಹಲಿಯಲ್ಲೇ ತಂಗಿದ್ದಾರೆ ಎಂದು ತಿಳಿದುಬಂದಿದೆ. ಇದರ ನಡುವೆ ನಾಳೆ ಬೆಳಿಗ್ಗೆ ಸಚಿವರ ಬ್ರೇಕ್ಫಾಸ್ಟ್ ಸಭೆ ನಡೆಯಲಿದ್ದು, ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜೀನಾಮೆಯ ನಂತರ ಡಿ.ಕೆ. ಶಿವಕುಮಾರ್ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳನ್ನು ಆರಂಭಿಸಬಹುದು ಎಂಬ ನಿರೀಕ್ಷೆಯಿದೆ. ಮತ್ತೊಂದೆಡೆ ಡಿ.ಕೆ. ಶಿವಕುಮಾರ್, ಸತೀಶ್ ಜಾರಕಿಹೊಳಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ದೆಹಲಿಯಲ್ಲಿ ಮಹತ್ವದ ಚರ್ಚೆಗಳು ನಡೆಯಲಿದ್ದು, ಪಕ್ಷ ಹಾಗೂ ಸರ್ಕಾರವನ್ನು ಮುಂದಿನ ದಿನಗಳಲ್ಲಿ ಹೇಗೆ ಮುನ್ನಡೆಸಬೇಕು, ಎಲ್ಲರನ್ನೂ ವಿಶ್ವಾಸಕ್ಕೆ ಹೇಗೆ ತೆಗೆದುಕೊಳ್ಳಬೇಕು ಹಾಗೂ ಪಕ್ಷದ ಒಳಒಗ್ಗಟ್ಟನ್ನು ಹೇಗೆ ಕಾಪಾಡಬೇಕು ಎಂಬ ವಿಚಾರಗಳಲ್ಲಿ ಖರ್ಗೆ ಮಾರ್ಗದರ್ಶನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಸಿದ್ದರಾಮಯ್ಯರ ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆಯೂ ಕುತೂಹಲ ಹೆಚ್ಚಿದ್ದು, ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸುತ್ತಾರೆಯೇ ಅಥವಾ ಹೊಸ ರಾಜಕೀಯ ಜವಾಬ್ದಾರಿ ಸ್ವೀಕರಿಸುತ್ತಾರೆಯೇ ಎಂಬ ಪ್ರಶ್ನೆಗಳು ಮೂಡಿವೆ. ಈಗಾಗಲೇ ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸಿದ್ದರಾಮಯ್ಯ ಹಲವು ಬಾರಿ ಸ್ಪಷ್ಟಪಡಿಸಿದ್ದು, ರಾಜ್ಯಸಭಾ ಸದಸ್ಯತ್ವದ ಆಫರ್ ಅನ್ನು ನಿರಾಕರಿಸಿದ್ದಾರೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂದು ರಾಹುಲ್ ಗಾಂಧಿ ಎದುರು ಅವರು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸುವ ಸಮನ್ವಯ ಸಮಿತಿ ರಚನೆಗೆ ಒತ್ತಾಯ ಮಾಡಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಇರುವ ಕಾರಣ ಹೈಕಮಾಂಡ್ ತಕ್ಷಣವೇ ಅಂತಹ ಸಮಿತಿಗೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವರ ಮುಂದಿನ ಪಾತ್ರ ಏನಾಗಲಿದೆ, ಸರ್ಕಾರದ ಹೊರಗಿದ್ದರೂ ಪಕ್ಷದೊಳಗೆ ಪ್ರಭಾವಿ ನಾಯಕರಾಗಿ ಮುಂದುವರಿಯಲಿದ್ದಾರೆಯೇ ಅಥವಾ ಹೊಸ ರಾಜಕೀಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಎಲ್ಲರ ಗಮನ ಈಗ ದೆಹಲಿ ರಾಜಕೀಯ ಬೆಳವಣಿಗೆಗಳು ಹಾಗೂ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದತ್ತ ನೆಟ್ಟಿದೆ.




