
ಮಂಡ್ಯ: ತಾನು ಅಂಗವಿಕಲೆ ಎಂದು ಸುಳ್ಳು ಮಾಹಿತಿ ನೀಡಿ ವಿಕಲಚೇತನರ ಉಚಿತ ಬಸ್ ಪಾಸ್ ಪಡೆದು ಕೆಎಸ್ಆರ್ಟಿಸಿ ಸಂಸ್ಥೆಗೆ ವಂಚನೆ ಎಸಗಿದ್ದ ಪ್ರಕರಣದಲ್ಲಿ ಮಂಡ್ಯದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಫ್ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದ ಶೃತಿ ಎಂಬ ಸರ್ಕಾರಿ ನೌಕರಿಗೆ ಮಂಡ್ಯ ಜೆಎಂಎಫ್ಸಿ ನ್ಯಾಯಾಲಯ ಒಂದು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 10 ಸಾವಿರ ರೂ. ದಂಡ ಹಾಗೂ ಸಾರಿಗೆ ಸಂಸ್ಥೆಗೆ ಉಂಟಾದ ಸುಮಾರು 47 ಸಾವಿರ ರೂ. ನಷ್ಟವನ್ನು ಭರಿಸುವಂತೆ ಆದೇಶಿಸಿದೆ. ಸರ್ಕಾರಿ ನೌಕರರು ಇಂತಹ ಸೌಲಭ್ಯ ಪಡೆಯಲು ಅರ್ಹರಲ್ಲ ಎಂಬ ನಿಯಮವಿದ್ದರೂ ಶೃತಿ 2014ರ ಜನವರಿ 1ರಿಂದ 2015ರ ಅಕ್ಟೋಬರ್ 17ರವರೆಗೆ ವಿಕಲಚೇತನರ ಪಾಸ್ ಬಳಸಿ ಉಚಿತವಾಗಿ ಪ್ರಯಾಣಿಸಿ ಸಂಸ್ಥೆಗೆ 46,640 ರೂ. ನಷ್ಟ ಉಂಟುಮಾಡಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ಮಂಡ್ಯ ಪೂರ್ವ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಕುಮಾರ್ ಅವರು ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಆರೋಪಿಯನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದ್ದು, ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಈ ಘಟನೆ ಎಚ್ಚರಿಕೆಯಾಗಿದೆ.




