
ನರಸಿಂಹರಾಜಪುರ: ತಾಲೂಕಿನ ಮುತ್ತಿನಕೊಪ್ಪ ಸಮೀಪದ ಕಣಿವೆ ಗ್ರಾಮದ ದೇವಸ್ಥಾನದ ಬಳಿ ಮರದ ಪೊದೆಯಲ್ಲಿ ನವಜಾತ ಹೆಣ್ಣು ಶಿಶುವೊಂದು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸುಮಾರು ಒಂದು ದಿನದ ಹಿಂದಷ್ಟೇ ಜನಿಸಿದ ಈ ಹೆಣ್ಣು ಮಗುವನ್ನು ಯಾರೋ ಪಾಪಿಗಳು ಅನಾಥವಾಗಿ ಬಿಟ್ಟು ಹೋಗಿದ್ದು, ರಕ್ತಸ್ರಾವವಾಗಿದ್ದ ಕಂದನನ್ನು ಟವಲ್ನಲ್ಲಿ ಸುತ್ತಿ ಪೊದೆಯಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ. ಸ್ಥಳೀಯ ನಿವಾಸಿಯೊಬ್ಬರು ನೀರು ಬಿಡಲು ತೆರಳಿದ ಸಂದರ್ಭದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ತೆಗೆದುಕೊಂಡು ಆರೈಕೆ ಮಾಡಿ, ಗ್ರಾಮಸ್ಥರಿಗೆ ಹಾಗೂ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಗುವನ್ನು ನರಸಿಂಹರಾಜಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಘಟನೆಯ ಕುರಿತು ಸಿಡಿಪಿಓ ದೂರು ನೀಡಿದ್ದು, ಅದರ ಆಧಾರದ ಮೇಲೆ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಬಿಟ್ಟುಹೋದ ಕಟುಕ ಪಾಲಕರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.



