
ಚಿಕ್ಕಮಗಳೂರು: ಜಿಲ್ಲೆಯ ಕಾಫಿನಾಡು ಹಾಗೂ ಮಲೆನಾಡು ಭಾಗಗಳಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮೂಡಿಗೆರೆ, ಆಲ್ದೂರು, ಬಾಳೆಹೊನ್ನೂರು, ಕಳಸ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಚಾರ್ಮಾಡಿ ಘಾಟ್ ತಪ್ಪಲಿನ ಕೊಟ್ಟಿಗೆಹಾರ ಪ್ರದೇಶದಲ್ಲಿ ಧಾರಾಕಾರ ಮಳೆಯೊಂದಿಗೆ ಭಾರೀ ಗಾಳಿ, ಸಿಡಿಲು ಹಾಗೂ ಗುಡುಗು ಸಹಿತ ಮಳೆ ಸುರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. ಮಳೆಯ ಅಬ್ಬರದಿಂದ ಕೆಲಕಾಲ ರಸ್ತೆಗಳಲ್ಲಿ ನೀರು ಹರಿದು ಸಂಚಾರಕ್ಕೂ ಅಡಚಣೆ ಉಂಟಾಯಿತು. ಇತ್ತ ಚಿಕ್ಕಮಗಳೂರು ನಗರದಲ್ಲೂ ವರುಣದೇವ ಭರ್ಜರಿಯಾಗಿ ಕರುಣೆ ತೋರಿದ್ದು, ಕಳೆದ ಕೆಲ ದಿನಗಳಿಂದ ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಮಲೆನಾಡು ಜನರಿಗೆ ತಂಪಿನ ವಾತಾವರಣ ಸಿಕ್ಕಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿದ ಈ ಮಳೆ ರೈತರಲ್ಲೂ ಸಂತಸ ಮೂಡಿಸಿದ್ದು, ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಕಂಡುಬಂದಿದೆ.





