
ರಾಯಚೂರು: ಜಿಲ್ಲೆಯ ಸಿಂಧನೂರು ನಗರದಲ್ಲಿ ಸಾಧು ಸಂತರ ಸೋಗಿನಲ್ಲಿ ಬಂದ ಖದೀಮರ ಗ್ಯಾಂಗ್ ಜನರ ಭಕ್ತಿ ಮತ್ತು ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಹಣ ಹಾಗೂ ಚಿನ್ನಾಭರಣ ದೋಚುತ್ತಿರುವ ಘಟನೆ ಆತಂಕ ಮೂಡಿಸಿದ್ದು, ನಗರದ ಪ್ರಮುಖ ರಸ್ತೆಯಲ್ಲಿರುವ ‘ಸಾಯಿ ಮೆಡಿಕಲ್ಸ್’ ಅಂಗಡಿಯಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾವಿ ಬಟ್ಟೆ ಧರಿಸಿ ಸಾಧುವಿನ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ, ಬಿಸಿಲಿನಿಂದ ಬಳಲಿರುವಂತೆ ನಟಿಸಿ ಅಂಗಡಿ ಮಾಲೀಕ ವಿಷ್ಣುದತ್ತು ಅವರ ಬಳಿ ಕುಡಿಯಲು ನೀರು ಕೇಳಿದ್ದು, ಮಾನವೀಯತೆಯಿಂದ ನೀರು ನೀಡಿದ ಮಾಲೀಕನನ್ನು ಹೊಗಳಿ, “ನಿನಗೂ ಮಕ್ಕಳಿಗೂ ಒಳ್ಳೆಯದಾಗುತ್ತದೆ” ಎಂದು ಹೇಳುತ್ತಾ ಎರಡು ಹೂವುಗಳನ್ನು ನೀಡಿದ್ದಾರೆ. ಆ ಹೂವಿನ ವಾಸನೆ ತಗುಲುತ್ತಿದ್ದಂತೆ ವಿಷ್ಣುದತ್ತು ಅವರು ಮಂಕುಬಿದ್ದ ಸ್ಥಿತಿಗೆ ತಲುಪಿದ್ದು, ಸಮ್ಮೋಹನಕ್ಕೊಳಗಾದಂತಾಗಿ ತಮ್ಮ ಜೇಬಿನಲ್ಲಿದ್ದ 10 ಸಾವಿರ ರೂಪಾಯಿ ನಗದು ಹಾಗೂ ಕೈಯಲ್ಲಿದ್ದ ಬಂಗಾರದ ಉಂಗುರವನ್ನು ಖುದ್ದಾಗಿ ಖದೀಮನಿಗೆ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದು, ಕೆಲ ಹೊತ್ತಿನ ನಂತರ ಪ್ರಜ್ಞೆಗೆ ಬಂದ ಅಂಗಡಿ ಮಾಲೀಕನಿಗೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಪ್ರಕರಣ ಸಂಬಂಧ ಸಿಂಧನೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸಾಯಿ ಮೆಡಿಕಲ್ಸ್ ಹಾಗೂ ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಸಾಧುಗಳ ವೇಷದಲ್ಲಿದ್ದ ಖದೀಮರ ತಂಡ ನಗರದಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿರುವುದು ಪತ್ತೆಯಾಗಿದೆ. ಧರ್ಮ ಮತ್ತು ಭಕ್ತಿಯ ಹೆಸರಿನಲ್ಲಿ ಜನರನ್ನು ಯಾಮಾರಿಸಿ ಹಣ ಹಾಗೂ ಒಡವೆ ದೋಚುತ್ತಿರುವ ಈ ಗ್ಯಾಂಗ್ ವಿರುದ್ಧ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಅಪರಿಚಿತರ ಮಾತಿಗೆ ಸುಲಭವಾಗಿ ನಂಬಿಕೆ ಇಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.




