
ನಟ ದರ್ಶನ್ ವಿರುದ್ಧದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದ್ದು, ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಕ್ಷಣ ಪರಿಗಣಿಸದೆ ಪ್ರಕರಣದ ವಿಚಾರಣೆಗೆ ಒಂದು ವರ್ಷದ ಕಾಲಾವಕಾಶ ನೀಡಿದೆ. ಇದರಿಂದ ದರ್ಶನ್ ಅವರಿಗೆ ಕನಿಷ್ಠ ಒಂದು ವರ್ಷ ಜೈಲು ವಾಸ ಖಚಿತವಾದಂತಾಗಿದೆ. ಸಾಕ್ಷ್ಯಗಳ ವಿಚಾರಣೆಯಲ್ಲಿ ವಿಳಂಬ, ಜೈಲಿನಲ್ಲಿ ಸೌಲಭ್ಯಗಳ ಕೊರತೆ, ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ಸಿಗದಿರುವುದು, ಆರೋಗ್ಯ ಸಮಸ್ಯೆ, ಸಹ ಕೈದಿಗಳಿಂದ ಕಿರುಕುಳ ಹಾಗೂ ಇನ್ನೂ ಕ್ವಾರಂಟೈನ್ ಸೆಲ್ನಲ್ಲೇ ಇರಿಸಲಾಗಿರುವುದು ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿ ದರ್ಶನ್ ಪರ ವಕೀಲರು ಸುಪ್ರೀಂ ಕೋರ್ಟ್ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಇಂದು ನಡೆದ ವಿಚಾರಣೆಯಲ್ಲಿ ಖ್ಯಾತ ವಕೀಲ ಮುಕುಲ್ ರೊಹ್ಟಗಿ ದರ್ಶನ್ ಪರ ವಾದ ಮಂಡಿಸಿ, ಪ್ರಕರಣದಲ್ಲಿ 272ಕ್ಕೂ ಹೆಚ್ಚು ಸಾಕ್ಷಿಗಳಿದ್ದು ಈವರೆಗೆ ಕೇವಲ 10 ಮಂದಿಯ ಸಾಕ್ಷ್ಯ ವಿಚಾರಣೆ ಮಾತ್ರ ಪೂರ್ಣಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿದ್ಧಾರ್ಥ್ ಲೂತ್ರಾ, ಆರೋಪಿಗಳು ಸಾಕ್ಷ್ಯಗಳಿಗೆ ಹಸ್ತಕ್ಷೇಪ ಮಾಡಿರುವ ವಿಚಾರಗಳನ್ನು ಹೇಳಿದರೆ ಜಾಮೀನು ಅರ್ಜಿಯೇ ರದ್ದಾಗಬಹುದು ಎಂದು ವಾದಿಸಿದರು. ಬಳಿಕ ಎರಡೂ ಕಡೆಯ ವಾದ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು, ಒಂದು ವರ್ಷದೊಳಗೆ ಕನಿಷ್ಠ 60 ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸುವಂತೆ ಸೂಚನೆ ನೀಡಿ, ಅದರ ಬಳಿಕ ವಿಚಾರಣಾ ನ್ಯಾಯಾಲಯದಲ್ಲೇ ದರ್ಶನ್ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು. ಜೊತೆಗೆ ಆರೋಪಿಗೆ ಇತರೆ ಕೈದಿಗಳಿಗೆ ನೀಡುವ ಸೌಲಭ್ಯಗಳನ್ನೇ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ ನ್ಯಾಯಾಲಯ, ಕ್ವಾರಂಟೈನ್ ಸೆಲ್ ವಿಚಾರದಲ್ಲಿ ಯಾವುದೇ ವಿಶೇಷ ಆದೇಶ ನೀಡಲು ನಿರಾಕರಿಸಿತು.




