
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಎಸ್ಟೇಟ್ ಸಮೀಪ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕಾಡುಕೋಣ ಸ್ಥಳಾಂತರ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಜ್ಜಾಗಿದ್ದು, ಈ ಮೂಲಕ ಕಾಫಿನಾಡು ಹೊಸ ಇತಿಹಾಸ ನಿರ್ಮಿಸಲು ಮುಂದಾಗಿದೆ. ಮಲೆನಾಡು ಭಾಗದಲ್ಲಿ ಕಾಡುಕೋಣ-ಮಾನವ ಸಂಘರ್ಷ ದಿನೇದಿನೇ ಹೆಚ್ಚಾಗುತ್ತಿದ್ದ ಹಿನ್ನೆಲೆ, ವಿಶೇಷವಾಗಿ ಕೊಪ್ಪ-ಕಳಸ ಭಾಗದ ರೈತರು ಬೆಳೆ ನಾಶ ಹಾಗೂ ಸಾರ್ವಜನಿಕರ ಮೇಲೆ ಕಾಡುಕೋಣಗಳ ದಾಳಿಯಿಂದ ಭಯದ ವಾತಾವರಣದಲ್ಲೇ ಬದುಕು ಸಾಗಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಪಾಯಕಾರಿ ಮೂರು ಕಾಡುಕೋಣಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಮಹತ್ವದ ಕಾರ್ಯಾಚರಣೆ ಆರಂಭಿಸಿದ್ದು, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಕಾರ್ಯಾಚರಣೆಯಲ್ಲಿ ಆರು ಪಶುವೈದ್ಯರ ತಂಡ ಭಾಗಿಯಾಗಿದ್ದು, ಎರಡು ಸಾಕಾನೆಗಳ ಸಹಾಯದಿಂದ ಕಾಡುಕೋಣಗಳನ್ನು ಸೆರೆ ಹಿಡಿಯುವ ಕಾರ್ಯ ನಡೆಯಲಿದೆ. ಈ ಕಾರ್ಯಾಚರಣೆ ಯಶಸ್ವಿಯಾದರೆ ದಕ್ಷಿಣ ಭಾರತದಲ್ಲೇ ಇದು ಹೊಸ ಇತಿಹಾಸವಾಗಲಿದ್ದು, ಮಲೆನಾಡು ರೈತರಿಗೆ ಕಾಡುಕೋಣ ಹಾವಳಿಯಿಂದ ಶಾಶ್ವತ ಪರಿಹಾರ ಸಿಗುವ ನಿರೀಕ್ಷೆ ಮೂಡಿಸಿದೆ.





