
ಬೆಂಗಳೂರು: ಜನಿವಾರ ಮತ್ತು ಹಿಜಾಬ್ ಸೇರಿದಂತೆ ಧಾರ್ಮಿಕ ಪದ್ಧತಿಗೆ ಅನುಗುಣವಾದ ವಸ್ತ್ರ ಧರಿಸಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಸಮವಸ್ತ್ರ ವಿಚಾರವಾಗಿ 2022ರಲ್ಲಿ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಹೊಸ ಆದೇಶ ಜಾರಿಗೆ ತಂದಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ಮೇ 13ರಂದು ಹೊರಡಿಸಲಾದ ಹೊಸ ಸರ್ಕಾರಿ ಆದೇಶದ ಪ್ರಕಾರ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಜನಿವಾರ, ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ಪೇಟ ಅಥವಾ ಟರ್ಬನ್, ತಲೆ ವಸ್ತ್ರ, ಹಿಜಾಬ್ ಸೇರಿದಂತೆ ಯಾವುದೇ ಸಾಂಪ್ರದಾಯಿಕ ಅಥವಾ ಧಾರ್ಮಿಕ ಸಂಕೇತಗಳನ್ನು ನಿಗದಿಪಡಿಸಿದ ಸಮವಸ್ತ್ರದೊಂದಿಗೆ ಧರಿಸಬಹುದಾಗಿದೆ. ಆದರೆ ಈ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಹಾಗೂ ಸಮವಸ್ತ್ರವನ್ನು ಬದಲಿಸುವ, ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಕೋರಮಂಗಲದ ಕಾಲೇಜೊಂದರಲ್ಲಿ ಏಪ್ರಿಲ್ 24ರಂದು ನಡೆದ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್ಗೆ ಪ್ರವೇಶಿಸುವ ಮುನ್ನ ಜನಿವಾರ ತೆಗೆದುಹಾಕುವಂತೆ ಸೂಚಿಸಿದ್ದ ಘಟನೆ ಬಳಿಕ ಸರ್ಕಾರ ಈ ಕ್ರಮ ಕೈಗೊಂಡಿದೆ. ಇದೇ ವೇಳೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಅನುಮತಿಸಲಾದ ಧಾರ್ಮಿಕ ಅಥವಾ ಸಾಂಪ್ರದಾಯಿಕ ಚಿಹ್ನೆಗಳನ್ನು ಧರಿಸಿದ್ದಕ್ಕಾಗಿ ಯಾವುದೇ ವಿದ್ಯಾರ್ಥಿಗೆ ತರಗತಿ ಕೊಠಡಿ, ಪರೀಕ್ಷಾ ಸಭಾಂಗಣ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶ ನಿರಾಕರಿಸಬಾರದು ಎಂದು ಸ್ಪಷ್ಟಪಡಿಸಿದರು. ಯಾರನ್ನೂ ಅಂತಹ ಚಿಹ್ನೆಗಳನ್ನು ಧರಿಸಲು ಅಥವಾ ತೆಗೆದುಹಾಕಲು ಬಲವಂತ ಮಾಡಬಾರದು ಎಂದೂ ಹೇಳಿದರು. ಉಡುಪಿಯಲ್ಲಿ ಆರಂಭಗೊಂಡಿದ್ದ ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದ ಹಿನ್ನೆಲೆ 2022ರಲ್ಲಿ ಬಿಜೆಪಿ ಸರ್ಕಾರ ಸಮವಸ್ತ್ರ ಕುರಿತ ಆದೇಶ ಹೊರಡಿಸಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿತ್ತು. ಇದೀಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆ ಆದೇಶವನ್ನು ವಾಪಸ್ ಪಡೆದು ಹೊಸ ಮಾರ್ಗಸೂಚಿ ಜಾರಿಗೆ ತಂದಿದೆ.




