ಥತ್! ನಾವು ಯಾರನ್ನೂ ಹಚ್ಚಿಕೊಳ್ಳಬಾರದು ಅಂತ ಆತ ಪೀಠಿಕೆ ಹಾಕಿದ್ದ . ನಂಗೆ ಗೊತ್ತಾಗಿ ಹೋಗಿತ್ತು. ಯಾರಿದಂಲೋ ಅವನಿಗೆ ಡಿಸಪಾಯಿಂಟ್ ಆಗಿದೆ ಅಂತ. ನೀವು ಸುಮ್ಮನೆ ಗಮನಿಸಿ ನೋಡಿ ನಾನು ಎಷ್ಟೋ ವಿಷಯಗಳನ್ನು ಹಚ್ಚಿಕೊಂಡಿದ್ದೆ.., ನಿಂಗೆ ನನ್ನ ಬಗ್ಗೆ ಕೇರ್ಲೆಸ್ ಅಲ್ವಾ.. ಇಂತಹ ಮಾತುಗಳು ಆಗಾಗ ಹೆಚ್ಚು ಕಡಿಮೆ ಪ್ರತಿದಿನ ಕೇಳಿಸಿರುತ್ತದೆ. ಆದರೆ ನಿಮ್ಮ ಕುರಿತೇ ಇಂತಹ ಮಾತು ಕೇಳಿ ಬಂದಿದೆಯಾ? ಹಾಗಿದ್ರೆ ಮಾತ್ರ ನೀವು ಕೊಂಚ ಯೋಚಿಸಬೇಕಾಗುತ್ತದೆ. ಇಲ್ಲಿ ಪ್ರೀತಿ-ಪ್ರೇಮದ ಬಗ್ಗೆ ನಾನು ಹೇಳುತ್ತಿಲ್ಲ. ಡಿಪೆಂಡ್ ಆಗೋದು ಅಂತಾರಲ್ಲ ಅದರ ಬಗ್ಗೆ ಹೇಳ್ತಿದೀನಿ. ವೃದ್ಧ ತಂದೆ ತಾಯಿಗಳು, ಗಂಡನನ್ನು ಕಳೆದುಕೊಂಡು ತವರಿಗೆ ಮರಳಿದ ಹೆಣ್ಣು ಮಗಳು, ಅಂಗವಿಕಲತೆಗೆ ಒಳಗಾದವರನ್ನು ನೀವು ಡಿಪೆಂಡೆಂಟ್ ಪರ್ಸನ್ಸ್ ಅಂತೀರೇನೋ.., ನಾನ್ಸೆನ್ಸ್. ಬದುಕಿನ ಮುಸ್ಸಂಜೆಯಲ್ಲಿ ತಂದೆ ತಾಯಿಗಳು ಮಕ್ಕಳ ಜೊತೆಗಿದ್ದರೆ ಅದನ್ನು ಡಿಪೆಂಡ್ ಆಗಿದ್ದಾರೆ ಅಂದ್ರೆ ಅರ್ಥವಿದೆಯಾ ಹೇಳಿ…? ನಿಮ್ಮ ಮಗುವಿಗೆ ಅಜ್ಜ ಅಜ್ಜಿಯರೊಂದಿಗೆ ಆಟವಾಡುವ ಭಾಗ್ಯ ಒದಗಿಸಿ ನೀವು ಖುಷಿ ಪಡಬೇಕು. ಅದನ್ನು ಬಿಟ್ಟು ನಮ್ಮ ಅಪ್ಪ ಅಮ್ಮನೂ ನಮ್ಜೊತೇಗೆ ಇದ್ದಾರೆ.. (ಯಾಕಾದರೂ ಇದ್ದಾರೋ..) ಅಂತ ಹಲುಬಬಾರದು. ನಮ್ಮ ಬಾಲ್ಯದಲ್ಲಿ ಒಂದು ಕ್ಷಣವೂ ನಮ್ಮ ಅಪ್ಪ ಅಮ್ಮದಿಂರೂ ನಮ್ಮನ್ನು ಬಿಟ್ಟು ಹೋಗ್ತಾ ಇರ್ಲಿಲ್ಲ. ಇವತ್ತಿಗೂ ನೋಡಿ ಮಗೂನ ಬಿಟ್ಟು ಬರೋಕೆ ಕಷ್ಟ ಅಂತ ಹೇಳ್ತಾರೆಯೇ ವಿನಃ ಹೇಗೆ ಬರೋಕಾಗುತ್ತೆ ಮಗು ನಮ್ಮ ಮೇಲೆ ಡಿಪೆಂಡ್ ಆಗಿದೆ ಅಂತ ಯಾವ ತಂದೆ ತಾಯಿ ಆದ್ರೂ ಹೇಳಿದ್ದನ್ನು ಕೇಳಿಸಿಕೊಂಡಿದ್ದೀರಾ..? ಅದು ಆ ಬಂಧಕ್ಕಿರುವ ಮಹತ್ವ. ಇರಲಿ ಬಿಡಿ, ವಿಷಯಾಂತರ ಮಾಡೋದು ಬೇಡ. ಈಗ ನಾನು ಹೇಳ್ತಾ ಇರೋದು ನೀವು ಯಾರ ಮೇಲಾದ್ರು ಡಿಪೆಂಡ್ ಆಗಿದ್ದೀರಾ..? ಅಂದ್ರೆ ಅವರೊಂದಿಗೊಂದು ಭಾವನಾತ್ಮಕವಾದ ಸಂಬಂಧ ಇರಿಸಿಕೊಂಡಿದ್ದೀರಾ..? ಊಹುಂ ಅದಲ್ಲ. ಯಾರಾದ್ರು ನಿಮ್ಮೊಂದಿಗೆ ಅಂಥದ್ದೊಂದು ಅಟ್ಯಾಚ್ಮೆಂಟ್ ಇರಿಸಿಕೊಂಡಿದ್ದಾರಾ..? ನಿಮಗೇ ಗೊತ್ತಲ್ಲದೇ ನಿಮ್ಮೊಂದಿಗೆ ಯಾರಾದ್ರು ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರಾ..? ಫ್ಲೀಸ್ ರೆಸ್ಪೆಕ್ಟ್ ದೇರ್ ಫೀಲಿಂಗ್ಸ್…ಅವರ ಭಾವನೆಗಳನ್ನು ಗೌರವಿಸಿ. ಉಳಿದ ಎಲ್ಲಾ ನೋವುಗಳಿಗಿಂತ ನಮ್ಮ ಮೇಲೆ ಡಿಪೆಂಡ್ ಆಗಿರೋನ್ನ ನಾವು ನೋಯಿಸೋ ನೋವಿನ ಯಾತನೆ ಜಾಸ್ತಿಯಾಗಿರುತ್ತೆ! ಹಾಗೆ ನೊಂದು ಬಂದವರ ಬಾಯಿಂದಲೇ ನಾವು ಥತ್ ಯಾರನ್ನೂ ನಂಬಬಾರದು ಅನ್ನೋ ನೋವಿನ ಉದ್ಗಾರವನ್ನು ಕೇಳೋದಿಕ್ಕೆ ಸಾಧ್ಯ. ನಾನೇನು ಹೇಳಿದ್ನಾ..? ನನ್ನ ಮೇಲೆ ಡಿಪೆಂಡ್ ಆಗು ಅಂತ ಅನ್ನೋ ಅರ್ಥದಲ್ಲಿ ನೀವು ಮಾತಾಡಿದ್ರೆ ಅದೂ ನಿಮ್ಮ ಕಠಿಣ ಹೃದಯವನ್ನು ತಿಳಿಸುತ್ತೆ ಅಷ್ಟೆ. ನಾನು ಯಾರ ಮೇಲೂ ಡಿಪೆಂಡ್ ಆಗಲ್ಲ.. ಅಂತ ನೀವು ಹೇಳ್ತೀರಾ… ವೆಲ್ ಅದು ನಿಮ್ಮ ಗಟ್ಟಿತನ. ಆದ್ರೆ ಯಾರು ಯಾರ ಮೇಲೂ ಡಿಪೆಂಡ್ ಆಗಬಾರದು, ಒಂದು ಭಾವನಾತ್ಮಕ ಬೆಸುಗೆ ಇರಬಾರದು ಅಂದ್ರೆ ಹೇಗೆ…? ಬೆಳಿಗ್ಗೆಯಿಂದ ಏನೆಲ್ಲಾ ಆಯ್ತು ಅಂತ, ಗೆದ್ದ ಗೆಲುವು, ಕ್ಲಾಸ್ನಲ್ಲಿ ಲೆಕ್ಚರ್ ಬೈದ್ರು, ಮನಸ್ಸಿನ ನೋವು.. ಇಂತಹುಗಳನ್ನೇ ಅಲ್ವಾ ಅವರು ಹೇಳಿಕೊಳ್ಳೋದು.. ಅದನ್ನು ಶ್ರದ್ಧೆಯಿಂದ ಕೇಳಿಸಿಕೊಳ್ಳೋಕು ಆಗಲ್ಲ ಅಂದ್ರೆ ಏನ್ರೀ…? ನಾವು ಮನುಷ್ಯರು ಮನುಷ್ಯತ್ವ, ಅಂತಃಕರಣ ಇರೋರು ಇನ್ನೊಬ್ಬರ ನೋವಿಗೆ ಸ್ಪಂದಿಸಲು ಆಗಲ್ವಾ…? ನಿಮಗಾಗಿ ಹಾತೊರೆಯುವ ಜೀವಕ್ಕೆ ಒಂದಿಷ್ಟು ಸಮಯ ಅಂತ ಮೀಸಲಿಡಿ. ಅವರ ಸಂತೋಷ, ದುಃಖವನ್ನು ಶೇರ್ ಮಾಡ್ಕೊಳ್ಳಿ. ಬದುಕಿನಲ್ಲಿ ಗಳಿಸುವ ಹಣ, ಆಸ್ತಿ, ಹೆಸರಿಗಿಂತ ಗಳಿಸಿಕೊಳ್ಳೋ ಪ್ರೀತಿಯ ಮೌಲ್ಯ ಹೆಚ್ಚು!
ಕೊನೆಯದಾಗಿ ಒಂದು ಮಾತು. ಡಿಪೆಂಡ್ ಆಗಿದೀನಿ ಅನ್ನೋ ಕಾರಣಕ್ಕೆ ಪದೇ ಪದೇ ನಿಮ್ಮ ಗೆಳೆಯ/ಗೆಳತಿಗೆ ಹಿಂಸೆ ಕೊಡಬೇಡಿ. ಉದಾಹರಣೆ ನಿಮ್ಮ ಗೆಳೆಯ ಚಾಲಕ ವೃತ್ತಿಯಲ್ಲಿದ್ರೆ ಆತನ ಬಿಡುವು ನೋಡಿಕೊಂಡು ಮಾತಾಡಿ. ಇಲ್ಲಾಂದ್ರೆ ನಿಮ್ಮ ಕರೆಯೇ ಆತನ ಬದುಕಿನ ಕೊನೆಯ ಕರೆ ಆಗಬಹುದು. ನೀವು ಪೊಸೆಸೀವ್ ಆಗಿದ್ರೆ ಅಭ್ಯಂತರವಿಲ್ಲ. ಮೊಂಡುತನ ಮಾಡಬೇಡಿ. ನಿಮ್ಮ ಸ್ನೇಹಿತನ ದಿನದಲ್ಲಿ ನೀವು ಪಾಲು ಕೇಳಿ ತಪ್ಪಲ್ಲ. ಆದ್ರೆ ನಿನ್ನ ಇಡೀ ದಿನವನ್ನೇ ನಂಗೆ ಮೀಸಲಿಡು ಅಂದ್ರೆ ಹೇಗೆ? ಸಂಬಂಧದ ಗಟ್ಟಿತನ ಉಳಿಯಲು ಪರಸ್ಪರರ ನಡುವೆ ಹೊಂದಾಣಿಕೆಯೂ ಮುಖ್ಯ ಅಲ್ವಾ..?
