
ವಿಜಯನಗರ: ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ನ್ಯಾಯಾಲಯವು ಕಠಿಣ ಕ್ರಮ ಕೈಗೊಂಡು ಸಾರಿಗೆ ಇಲಾಖೆಯ ಕೊಪ್ಪಳ ಡಿಪೋಗೆ ಸೇರಿದ ಎರಡು ಬಸ್ಗಳನ್ನು ಜಪ್ತಿ ಮಾಡಿರುವ ಘಟನೆ ನಡೆದಿದೆ. 2019ರಲ್ಲಿ ಇದೇ ಡಿಪೋಗೆ ಸೇರಿದ ಬಸ್ ಮತ್ತು ಆಟೋ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ನಾಗಪ್ಪ (50) ಹಾಗೂ ನಾಗಮ್ಮ (24) ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಮೃತರ ಕುಟುಂಬಸ್ಥರು ಸೂಕ್ತ ಪರಿಹಾರಕ್ಕಾಗಿ ಕೂಡ್ಲಿಗಿ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಅವರ ಪರ ವಕೀಲರಾದ ಜಿ. ಸೀತಾರಾಮ್ ಗೌಡ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಒಬ್ಬ ಕುಟುಂಬಕ್ಕೆ 12 ಲಕ್ಷ ರೂ. ಹಾಗೂ ಮತ್ತೊಬ್ಬರಿಗೆ 20 ಲಕ್ಷ ರೂ. ಪರಿಹಾರ ನೀಡುವಂತೆ ಈ ಹಿಂದೆಯೇ ಆದೇಶಿಸಿತ್ತು, ಆದರೆ ಸಾರಿಗೆ ಇಲಾಖೆ ಅನಗತ್ಯ ವಿಳಂಬ ನೀತಿ ಅನುಸರಿಸಿ ಪರಿಹಾರ ನೀಡದೇ ಇರುವುದನ್ನು ಖಂಡಿಸಿ ವಕೀಲರು ಮತ್ತೆ ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ನೊಂದ ಕುಟುಂಬಗಳಿಗೆ ತುರ್ತಾಗಿ ಪರಿಹಾರ ಒದಗಿಸಲು ನ್ಯಾಯಾಧೀಶರು ಕೊಪ್ಪಳ ಡಿಪೋದ ಎರಡು ಬಸ್ಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದರು. ನ್ಯಾಯಾಲಯದ ಸೂಚನೆಯಂತೆ ಏಪ್ರಿಲ್ 28ರ ಬೆಳಿಗ್ಗೆ ಕೂಡ್ಲಿಗಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಸ್ಗಳನ್ನು ಅಲ್ಲಿಂದ ನ್ಯಾಯಾಲಯಕ್ಕೆ ಕರೆತಂದು ಅಮೀನ್ ಸಿಬ್ಬಂದಿಗಳಾದ ವಿ. ಚನ್ನಪ್ಪ ಮತ್ತು ಎನ್.ವಿ. ಪರಮೇಶ್ವರ ಅವರು ಜಪ್ತಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ವೇಳೆ ಕಕ್ಷಿದಾರರಾದ ಶಿವಪುರ ಗ್ರಾಮದ ಸತ್ಯಮ್ಮ ಹಾಗೂ ಕೊಟ್ರಮ್ಮ, ಅವರ ಪರ ವಕೀಲರಾದ ಸೀತಾರಾಮ್ ಹಾಗೂ ಸಹಪಾಟಿ ವಕೀಲ ಖಲಂಧರ್ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ




