
ಚಿಕ್ಕಮಗಳೂರು: ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯ 3ನೇ ತಿರುವಿನಲ್ಲಿ ಒಂಟಿ ಸಲಗ ಪ್ರತ್ಯಕ್ಷಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಎತ್ತರದ ಪ್ರದೇಶದಲ್ಲಿ ನಿಂತಿದ್ದ ಕಾಡಾನೆಯೊಂದು ರಸ್ತೆ ದಾಟಲು ಜಾಗ ಹುಡುಕುತ್ತಿದ್ದು, ಕೆಳಗಿಳಿಯಲು ಹೆದರಿ ಕೆಲಗಂಟೆಗಳ ಕಾಲ ಅಲ್ಲೇ ನೋಡುತ್ತಾ ನಿಂತಿತ್ತು. ಕೆಳಗೆ ಬೀಳುವ ಭಯದಿಂದ ಸುರಕ್ಷಿತ ದಾರಿ ಹುಡುಕುತ್ತಿದ್ದ ಸಲಗವನ್ನು ಕಂಡು ವಾಹನ ಸವಾರರು ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದರು. ಘಟನಾ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಅರಣ್ಯ ಇಲಾಖೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದ್ದು, ಮುಂಜಾನೆ ವೇಳೆಯಲ್ಲಿ ಪ್ರಯಾಣಿಕರು ವಾಹನಗಳನ್ನು ಎಚ್ಚರಿಕೆಯಿಂದ ಚಲಾಯಿಸಬೇಕು ಎಂದು ಅರಣ್ಯ ಇಲಾಖೆವರು ಮನವಿ ಮಾಡಿದ್ದಾರೆ.




