
ಅಂಕೋಲಾ: ತಾಲ್ಲೂಕಿನ ಕಂಚಿನಬಾಗಿಲು ಸಮೀಪದ ರಾಷ್ಟ್ರೀಯ ಹೆದ್ದಾರಿ-52ರಲ್ಲಿ ಗುರುವಾರ ಮಧ್ಯಾಹ್ನ ಭೀಕರ ದುರ್ಘಟನೆ ಸಂಭವಿಸಿದ್ದು, ರಾಸಾಯನಿಕ ದ್ರಾವಣ ತುಂಬಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಬೆಳಗಾವಿಯಿಂದ ಮಂಗಳೂರಿನತ್ತ ಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕ್ಲೀನರ್ ನಾಪತ್ತೆಯಾಗಿದ್ದಾನೆ. ಬೆಟ್ಟಗಾಡಿನಲ್ಲಿ ಸಾಗುತ್ತಿದ್ದ ಈ ಟ್ಯಾಂಕರ್ ಕಂಚಿನಬಾಗಿಲು ತಿರುವಿನಲ್ಲಿ ಉರುಳಿ ಬಿದ್ದಿದ್ದು, ಪಲ್ಟಿಯಾದ ಬೆನ್ನಲ್ಲೇ ಟ್ಯಾಂಕರ್ನಿಂದ ರಾಸಾಯನಿಕ ಸ್ಫೋಟಗೊಂಡು, ಜ್ವಾಲೆಗಳು ಉಂಟಾಗಿ ನೂರಾರು ಅಡಿ ಎತ್ತರಕ್ಕೆ ಬೆಂಕಿ ಜ್ವಾಲೆ ಚಿಮ್ಮಿದೆ. ಸ್ಫೋಟದ ತೀವ್ರತೆಗೆ ಟ್ಯಾಂಕರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಸುತ್ತಮುತ್ತಲಿನ ಮರಗಳಿಗೂ ಬೆಂಕಿ ವ್ಯಾಪಿಸಿ ಕಾಡ್ಗಿಚ್ಚು ಹೊತ್ತಿರುವ ವಾತಾವರಣ ಸೃಷ್ಟಿಯಾಗಿತ್ತು, ಘಟನೆ ಸ್ಥಳಕ್ಕೆ ಅಂಕೋಲಾ, ಕಾರವಾರದ ಅಗ್ನಿಶಾಮಕ ದಳ ಹಾಗೂ ಐಎನ್ಎಸ್ ವಜ್ರಕೋಶದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಕ್ರಮ ಕೈಗೊಂಡರು.



