
ಚಿಕ್ಕಮಗಳೂರು: ಕಾಫಿನಾಡಲ್ಲಿ ನಕಲಿ ಐಎಎಸ್ ಅಧಿಕಾರಿ ಪ್ರಕರಣ ಬೆಳಕಿಗೆ ಬಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೂಲದ ಮಿಥುನ್ ಎಂಬಾತನನ್ನು ಬೆಂಗಳೂರಿನ ಉತ್ತರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ತಾನೊಬ್ಬ ಐಎಎಸ್/ಐಎಸ್ಸೆಸ್ ಅಧಿಕಾರಿ ಎಂಬಂತೆ ನಟಿಸಿದ್ದ ಆರೋಪಿ, ಎನ್ಎಚ್ಎಂ ಅಧಿಕಾರಿಯಂತೆ ವರ್ತಿಸಿ ಮೆಡಿಕಲ್ ಸಪ್ಲೈ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ನಕಲಿ ಐಎಎಸ್ ಹೆಸರಿನಲ್ಲಿ ಹಲವರಿಂದ 2 ಕೋಟಿಗೂ ಅಧಿಕ ಹಣವನ್ನು ಮೋಸ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಬೆಂಗಳೂರಿನಲ್ಲಿ ಲಾಡ್ಜ್ನಲ್ಲಿ ನಡೆದ ಗಲಾಟೆ ವೇಳೆ ಈತನ ವಂಚನೆ ಬಯಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಚಿಕ್ಕಮಗಳೂರಿನಲ್ಲಿ ವೈದ್ಯರು ಹಾಗೂ ನರ್ಸ್ಗಳೊಂದಿಗೆ ಸಭೆ ನಡೆಸಿ ಅಧಿಕಾರಿಯಂತೆ ವರ್ತಿಸಿದ್ದೂ ತಿಳಿದುಬಂದಿದೆ. ನಕಲಿ ದಾಖಲೆ ಸೃಷ್ಟಿಗೆ ಸಹಕರಿಸಿದವರನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.




