
ಸಿಬ್ಬಂದಿ ಆಯ್ಕೆ ಆಯೋಗ (SSC) ಸೆಲೆಕ್ಷನ್ ಪೋಸ್ಟ್ ಹಂತ-14 ಅಡಿಯಲ್ಲಿ ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳು ಹಾಗೂ ಇಲಾಖೆಗಳಲ್ಲಿನ ಒಟ್ಟು 3,000 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, 10ನೇ ತರಗತಿ, 12ನೇ ತರಗತಿ ಮತ್ತು ಪದವೀಧರರಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮೇ 4ರೊಳಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಶುಲ್ಕ ಪಾವತಿಗೆ ಮೇ 5ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿಗಳ ತಿದ್ದುಪಡಿ ವಿಂಡೋ ಮೇ 11ರಿಂದ 13ರವರೆಗೆ ತೆರೆಯಲಿದೆ. ಹುದ್ದೆಗಳಲ್ಲಿನ ಮೀಸಲಾತಿ ಪ್ರಕಾರ ಸಾಮಾನ್ಯ ವರ್ಗಕ್ಕೆ 1,534, ಒಬಿಸಿ 667, ಎಸ್ಸಿ 346, ಇಡಬ್ಲ್ಯೂಎಸ್ 271 ಮತ್ತು ಎಸ್ಟಿ 185 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷವಾಗಿದ್ದು, ಗರಿಷ್ಠ ವಯೋಮಿತಿ ಹುದ್ದೆಗನುಸಾರ 25ರಿಂದ 30 ವರ್ಷಗಳವರೆಗೆ ಇರುತ್ತದೆ. ಜೂನ್ ತಿಂಗಳಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯುವ ನಿರೀಕ್ಷೆಯಿದ್ದು, ಈ ಬಾರಿ ಪರೀಕ್ಷಾ ಮಾದರಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಒಟ್ಟು 200 ಅಂಕಗಳ ಪರೀಕ್ಷೆಯಲ್ಲಿ 100 ಪ್ರಶ್ನೆಗಳು ಇರಲಿದ್ದು, 60 ನಿಮಿಷಗಳ ಅವಧಿ ನೀಡಲಾಗುತ್ತದೆ. ತಾರ್ಕಿಕತೆ, ಸಾಮಾನ್ಯ ಜ್ಞಾನ, ಗಣಿತ ಹಾಗೂ ಇಂಗ್ಲಿಷ್ ವಿಭಾಗಗಳಿಗೆ ತಲಾ 15 ನಿಮಿಷಗಳ ‘ವಿಭಾಗೀಯ ಸಮಯ’ವನ್ನು ಕಡ್ಡಾಯಗೊಳಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ‘ಸ್ಲೈಡಿಂಗ್ ವ್ಯವಸ್ಥೆ’ ಜಾರಿಗೆ ತರಲಾಗಿದ್ದು, ಅಭ್ಯರ್ಥಿಗಳು ತಮ್ಮ ಮೆರಿಟ್ ಆಧಾರದ ಮೇಲೆ ಉತ್ತಮ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗಿದೆ. ಇತ್ತೀಚಿನ ಪರಿಶೀಲನಾ ಪ್ರಕ್ರಿಯೆಯಲ್ಲಿ ಸುಮಾರು 300 ಅಭ್ಯರ್ಥಿಗಳಲ್ಲಿ 220 ಮಂದಿ ತಮ್ಮ ಹುದ್ದೆಗಳನ್ನು ಅಂತಿಮಗೊಳಿಸಿದ್ದು, ಉಳಿದವರು ಉತ್ತಮ ಅವಕಾಶಗಳಿಗಾಗಿ ಕಾಯುತ್ತಿರುವುದಾಗಿ ತಿಳಿದುಬಂದಿದೆ.



