
ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ದುರುಪಯೋಗ ಮಾಡಿಕೊಂಡು ಬಿಎಂಟಿಸಿ ಕಂಡೆಕ್ಟರ್ಗಳು ಲಕ್ಷಾಂತರ ರೂಪಾಯಿ ವಂಚನೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಕನ್ನಡ ಮಾತನಾಡಲು ಬಾರದ ಪುರುಷ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಅವರಿಗೆ ಉಚಿತ ಟಿಕೆಟ್ ನೀಡಿದಂತೆ ತೋರಿಸಿ ಹಣ ವಸೂಲಿ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಕೆಲವು ನಿರ್ವಾಹಕರು ಅಧಿಕೃತ ಯುಪಿಐ ಕ್ಯೂಆರ್ ಕೋಡ್ ಬಳಸದೇ ತಮ್ಮ ವೈಯಕ್ತಿಕ ಕ್ಯೂಆರ್ ಕೋಡ್ ಮೂಲಕ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ಬಸ್ ಹೊರಟ ನಂತರ ಅಧಿಕೃತ ಕೋಡ್ ತೆಗೆದುಹಾಕಿ ಮೋಸ ನಡೆಸಿದ ವಿಚಾರವೂ ತಿಳಿದುಬಂದಿದೆ. ಈ ಪ್ರಕರಣದಲ್ಲಿ 10ಕ್ಕೂ ಹೆಚ್ಚು ನಿರ್ವಾಹಕರ ವಿರುದ್ಧ ಆರೋಪ ಕೇಳಿಬಂದಿದ್ದು, ಪ್ರತಿ ಖಾತೆಯಲ್ಲಿ ₹10,000 ರಿಂದ ₹50,000ವರೆಗೆ ವಹಿವಾಟು ಪತ್ತೆಯಾಗಿದೆ. ಈಗಾಗಲೇ ಸೂರ್ಯನಾರಾಯಣ, ಬೊಮ್ಮಲಿಂಗೇಶ್, ಬ್ರಿಜೇಶ್ ಬಾಬು ಹಾಗೂ ಮೋಹನ್ ಸೇರಿ ನಾಲ್ವರನ್ನು ಸಸ್ಪೆಂಡ್ ಮಾಡಲಾಗಿದ್ದು, ಇನ್ನಷ್ಟು ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಶಕ್ತಿ ಯೋಜನೆ ಟಿಕೆಟ್ ಕನ್ನಡದಲ್ಲೇ ಇರುವುದರಿಂದ ಪ್ರಯಾಣಿಕರ ಅಜ್ಞಾನವನ್ನು ದುರುಪಯೋಗ ಮಾಡಿಕೊಂಡಿರುವುದು ಗಮನಾರ್ಹವಾಗಿದ್ದು, ಇದೇ ರೀತಿಯ ಘಟನೆಗಳು ಹಿಂದೆಯೂ ನಡೆದಿರುವುದಾಗಿ ತಿಳಿದುಬಂದಿದೆ.



