ಕೊಟ್ಟಿಗೆಹಾರ: ಕೊಟ್ಟಿಗೆಹಾರದಲ್ಲಿ ಕಸಾಪ ರಥಯಾತ್ರೆ ಅಂಗವಾಗಿ ಕನ್ನಡ ಭುವನೇಶ್ವರಿ ರಥವು ಜಿಲ್ಲೆಯಾದ್ಯಂತ ಸಂಚರಿಸುತ್ತಿದ್ದು, ಕಡೂರಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕಳಸದಿಂದ ಕೊಟ್ಟಿಗೆಹಾರಕ್ಕೆ ಆಗಮಿಸಿದ ತಾಯಿ ಭುವನೇಶ್ವರಿ ರಥವು ಮಧ್ಯಾಹ್ನ ತೇಜಸ್ವಿ ಪ್ರತಿಷ್ಠಾನಕ್ಕೆ ತಲುಪಿತು. ಈ ಸಂದರ್ಭದಲ್ಲಿ ಭುವನೇಶ್ವರಿ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಕಸಾಪ ಜಿಲ್ಲಾ ಘಟಕದ ಗೌರವಾಧ್ಯಕ್ಷೆ ನಿರ್ಮಲಾ ಮಂಚೇಗೌಡ ಅವರು, ಕನ್ನಡ ರಥ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರಕ್ಕೆ ಆಗಮಿಸಿರುವುದು ಸಂತಸದ ಸಂಗತಿ ಎಂದೂ, ಈ ರಥಯಾತ್ರೆಯ ಸಂಚಾರವು ಸಾಂಸ್ಕೃತಿಕ ಪರಂಪರೆ, ಭಾಷೆ ಮತ್ತು ಅಸ್ಮಿತೆಯನ್ನು ಎತ್ತಿಹಿಡಿಯುವ ಪ್ರಮುಖ ಕಾರ್ಯಕ್ರಮವಾಗಿದ್ದು, ಕನ್ನಡ ಮನಸುಗಳು ಇದೇ 10ರಂದು ಕಡೂರಿನಲ್ಲಿ ನಡೆಯುವ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿ ಒಂದಾಗಿ ಕನ್ನಡ ಸಂಸ್ಕೃತಿಯ ಪರಂಪರೆಯನ್ನು ಉಳಿಸಬೇಕು ಎಂದು ಕರೆ ನೀಡಿದರು. ಬಳಿಕ ಮಾತನಾಡಿದ ಮೂಡಿಗೆರೆ ಕಸಾಪ ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಅವರು, ಕನ್ನಡ ಸಾಹಿತ್ಯ ಉಳಿಯಬೇಕಾದರೆ ನಾವು ಕನ್ನಡ ಭಾಷೆಯನ್ನು ಮಾತನಾಡಿ ಬೆಳೆಸಬೇಕು, ಭಾಷೆಯನ್ನು ಬಳಸುವುದರಿಂದಲೇ ಭಾಷೆ ಮತ್ತು ಸಾಹಿತ್ಯ ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಜೊತೆಗೆ ಮೂಡಿಗೆರೆಯಲ್ಲಿ ತಹಸೀಲ್ದಾರ್ ಅಶ್ವಿನಿ ಅವರು ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮುಂದಿನ ಪ್ರಯಾಣಕ್ಕೆ ಬೀಳ್ಕೊಡಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ರವಿರಾಜ್, ಯುವ ಘಟಕದ ಅಧ್ಯಕ್ಷ ಚಂದ್ರು ಒಡೆಯರ್, ಕಸಾಪ ಹೋಬಳಿ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಎಚ್.ಎಂ. ಶಾಂತಕುಮಾರ್, ರಾಮಚಂದ್ರ ಹಾಗೂ ಸದಸ್ಯರಾದ ಹಸೈನಾರ್ ಬಿಳಗುಳ, ಅನೂಪ್, ಸುಧೀರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
