ಹನೂರು : ನೆಲ್ಲಿಕತ್ರಿ ಗ್ರಾಮದಲ್ಲಿ ಇತ್ತೀಚಿಗೆ ಕಾಡ್ಗಿಚ್ಚು ಸಂಭವಿಸುತ್ತಿದ್ದು ಅಂತಹ ಘಟನೆಗಳಿಗೆ ಕಡಿವಾಣ ಹಾಕಲು ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ವಲಯ ಅರಣ್ಯ ಅಧಿಕಾರಿ ಪ್ರಮೋದ್ ತಿಳಿಸಿದರು.
ತಾಲೂಕಿನ ನೆಲ್ಲಿಕತ್ರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಭೆಯಲ್ಲಿ ಭಾಗವಹಿಸಿ ನಂತರ ಅವರು ಮಾತನಾಡಿದರು.
ನೆಲ್ಲಿಕತ್ರಿ ಗ್ರಾಮದ ಆಸುಪಾಸಿನಲ್ಲಿ ಕಳೆದೆರಡು ದಿನಗಳಿಂದ ಬೆಂಕಿಗೆ ಕಾಡು ಆಹುತಿಯಾಗುತ್ತಿದ್ದು ಯಾರೋ ಕಿಡಿಗೇಡಿಗಳು ಮಾಡುತ್ತಿರುವ ಕೆಲಸದಿಂದಾಗಿ ಇಡೀ ಗ್ರಾಮಕ್ಕೆ ಕೆಟ್ಟ ಹೆಸರು ಬರುತ್ತಿದೆ. ಜೊತೆಗೆ ಕಾಡನ್ನು ಬೆಂಕಿಗೆ ಆಹುತಿ ಮಾಡುತ್ತಿರುವಂತಹ ಘಟನೆಗಳು ಕಂಡುಬಂದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಡನ್ನು ಉಳಿಸಲು ಸಹಕಾರ ನೀಡಬೇಕು. ಅರಣ್ಯ ಸಂರಕ್ಷಣೆ ಮಾಡುವುದು ನಮ್ಮಿಬ್ಬರ ಜವಾಬ್ದಾರಿಯಲ್ಲ ಗ್ರಾಮಸ್ಥರ ಜವಾಬ್ದಾರಿ ಕೂಡ ಆಗಿದೆ. ಆ ನಿಟ್ಟಿನಲ್ಲಿ ಅರಣ್ಯ ಉಳಿಸಲು ತಾವೆಲ್ಲರೂ ಕೂಡ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸೋಲಿನ ಜನಾಂಗದ ಮುಖ್ಯಸ್ಥರಾದ ಡಾ. ಸಿ ಮಾದೇಗೌಡ ಮಾತನಾಡಿ ಅರಣ್ಯ ಸಂರಕ್ಷಣೆಗೆ ಗ್ರಾಮಸ್ಥರೆಲ್ಲರೂ ಕೂಡ ಯಾವುದೇ ಮುಲಾಜಿಲ್ಲದೆ ಸಹಕಾರ ನೀಡಬೇಕು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಲು ಮುಂದಾಗ ಬೇಕಾಗಿದೆ. ಆ ನಿಟ್ಟಿನಲ್ಲಿ ಗ್ರಾಮದ ಅಕ್ಕಪಕ್ಕ ಬೆಂಕಿ ಕಾಣಿಸಿಕೊಂಡಲ್ಲಿ ತಕ್ಷಣ ನಂದಿಸಿದ ಮುಂದಾಗಬೇಕು ಜೊತೆಗೆ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬೆಂಕಿ ಆರಿಸುವ ಪ್ರಯತ್ನ ಮಾಡಬೇಕು. ಆ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಕೂಡ ಒಂದಾಗಿ ಜೀವನ ನಡೆಸಬೇಕು ಎಂದರು.
- ಇದೆ ಸಂದರ್ಭದಲ್ಲಿ ತಾಲೂಕು ಬುಡಕಟ್ಟು ಸಂಘದ ಕಾರ್ಯದರ್ಶಿ ಯು.ರಂಗೇಗೌಡ,ಜಿಲ್ಲಾ ಕಾರ್ಯದರ್ಶಿ ಮಹಾದೇವಯ್ಯ,ಚಂದ್ರು, ಮಾದೇವ ಸೇರಿದಂತೆ ಇನ್ನಿತರರು ಇದ್ದರು.
