
ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಚಿಕ್ಕಮಾಗರಹಳ್ಳಿ ಗ್ರಾಮದಲ್ಲಿ ನಡೆಯುವ ಪುರಾತನ ಸುಗ್ಗಿ ಹಬ್ಬವನ್ನು ಈ ಬಾರಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗಿದ್ದು, ಈ ಸಂದರ್ಭದಲ್ಲಿ ಸಿ.ಟಿ. ರವಿ ಅವರು ಗ್ರಾಮಸ್ಥರ ಜೊತೆ ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದರು. ಹುಟ್ಟೂರಿನ ಉತ್ಸವದಲ್ಲಿ ಭಾಗವಹಿಸಿದ ಅವರು ತಮ್ಮ ಹಿರಿಯ ಪುತ್ರ ಸೂರ್ಯ ಹಾಗೂ ಕಾರ್ಯಕರ್ತರೊಂದಿಗೆ ಸುಮಾರು 5 ನಿಮಿಷಗಳ ಕಾಲ ನೃತ್ಯ ಮಾಡಿ ಸಂಭ್ರಮಿಸಿದರು. ಸಿ.ಟಿ. ರವಿ ಕುಣಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಸಹ ಸಾಥ್ ನೀಡಿ ಉತ್ಸವಕ್ಕೆ ಮತ್ತಷ್ಟು ಕಳೆ ತಂದರು. ಶತಮಾನಗಳ ಇತಿಹಾಸ ಹೊಂದಿರುವ ಈ ಸುಗ್ಗಿ ಹಬ್ಬವನ್ನು ಗ್ರಾಮಸ್ಥರು ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ತಿಂಗಳುಗಳ ಕಾಲ ಕಾಲಿಗೆ ಚಪ್ಪಲಿ ಹಾಕದೆ ಆಚರಿಸುವ ಸಂಪ್ರದಾಯವೂ ಇಲ್ಲಿ ಮುಂದುವರಿದಿದೆ. ದೇವರ ಉತ್ಸವದ ಮೆರವಣಿಗೆಯ ವೇಳೆ ಗ್ರಾಮಸ್ಥರ ಜೊತೆ ಸಿ.ಟಿ. ರವಿ ನೃತ್ಯ ಮಾಡಿರುವುದು ವಿಶೇಷವಾಗಿ ಗಮನಾರ್ಹವಾಗಿದೆ.



