
ಚಿಕ್ಕಮಗಳೂರು: ಮಲೆನಾಡು ಪ್ರದೇಶದಲ್ಲಿ ಕಾಡಾನೆ ಭೀತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಚಿಕ್ಕಮಗಳೂರು ತಾಲೂಕಿನ ಗುಡ್ಡೆಕೊಪ್ಪ ಗ್ರಾಮದ ಬಳಿ ಕಾಡಾನೆ ದಾಳಿ ನಡೆದ ಘಟನೆ ಆತಂಕಕ್ಕೆ ಕಾರಣವಾಗಿದೆ. ಬೈಕ್ ಸವಾರನೊಬ್ಬ ಕಾಡಾನೆಯನ್ನು ಕಂಡ ಕೂಡಲೇ ಬೈಕ್ ಬಿಟ್ಟು ಓಡಿ ಹೋಗಿ ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾನೆ. ಬಳಿಕ ಕಾಡಾನೆ ಬೈಕನ್ನು ತುಳಿದು ಪುಡಿ ಮಾಡಿದೆ.
ಈ ಘಟನೆ ಮಲೆನಾಡಿನ ಹಳ್ಳಿಗಳಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು, ಸ್ಥಳೀಯರು ಮತ್ತೊಂದು ಅನಾಹುತಕ್ಕೂ ಮುನ್ನವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮಲೆನಾಡು ಭಾಗದಲ್ಲಿ 9 ಮಂದಿ ಕಾಡಾನೆ ದಾಳಿಗೆ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆ ಜನರು ಹೆಚ್ಚು ಆತಂಕಗೊಂಡಿದ್ದಾರೆ.
ಇದೇ ವೇಳೆ ಕಾಡಾನೆ ಸಮಸ್ಯೆ ಕುರಿತು ಹೋರಾಟ ನಡೆಸಿದ ಕಾರ್ಯಕರ್ತರು ಪೊಲೀಸರಿಂದ ಒದೆ ತಿಂದು ಕೇಸ್ಗಳನ್ನು ಎದುರಿಸಿದ್ದಾರೆ. ಹೀಗಾಗಿ ಕೂಡಲೇ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಹಾಗೂ ಮತ್ತಷ್ಟು ಅಪಾಯ ತಪ್ಪಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮಲೆನಾಡಿಗರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.




