
ಭಾರತೀಯ ಐಟಿ ವಲಯಕ್ಕೆ ಭಾರೀ ಆಘಾತ ಉಂಟುಮಾಡುವಂತೆ, ಪ್ರಸಿದ್ಧ ತಂತ್ರಜ್ಞಾನ ಕಂಪನಿ ಒರಾಕಲ್ ವಿಶ್ವಾದ್ಯಂತ ಒಮ್ಮೆಲೇ ಸುಮಾರು 30,000 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ್ದು, ಅದರಲ್ಲೂ ಭಾರತದಲ್ಲೇ ಸುಮಾರು 12,000 ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಆಕಸ್ಮಿಕ ನಿರ್ಧಾರವು ಬೆಳಿಗ್ಗೆ 5–6 ಗಂಟೆ ಸುಮಾರಿಗೆ ‘ಒರಾಕಲ್ ಲೀಡರ್ಶಿಪ್’ರಿಂದ ಬಂದ ಒಂದೇ ಇಮೇಲ್ ಮೂಲಕ ತಿಳಿದುಬಂದಿದ್ದು, ಆರಂಭದಲ್ಲಿ ಹಲವರು ಇದನ್ನು ಏಪ್ರಿಲ್ ಫೂಲ್ ಎಂದು ಭಾವಿಸಿದರೂ ನಂತರ ಅವರ ಸಿಸ್ಟಮ್ ಆಕ್ಸೆಸ್ ಕೂಡ ತಕ್ಷಣವೇ ರದ್ದು ಮಾಡಲಾಗಿರುವುದು ಆಘಾತವನ್ನು ಹೆಚ್ಚಿಸಿದೆ. ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಉದ್ಯೋಗಿಗಳನ್ನೂ ಯಾವುದೇ ಪೂರ್ವ ಸೂಚನೆ ಇಲ್ಲದೆ ವಜಾಗೊಳಿಸಿರುವುದು ಉದ್ಯೋಗಿಗಳಲ್ಲಿ ಅಸಮಾಧಾನ ಹುಟ್ಟಿಸಿದೆ. ಭಾರತದಲ್ಲಿ ಒರಾಕಲ್ನ ಒಟ್ಟು ಸಿಬ್ಬಂದಿಯಲ್ಲಿ ಸುಮಾರು 40% ಜನರು ಈ ಕಡಿತಕ್ಕೆ ಒಳಗಾಗಿದ್ದು, ಕೆಲವು ತಂಡಗಳಲ್ಲಿ 50%ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕ್ರಮದಿಂದ ಈಗಾಗಲೇ ಸಂಕಷ್ಟದಲ್ಲಿರುವ ಐಟಿ ವಲಯದಲ್ಲಿ ಆತಂಕ ಹೆಚ್ಚಾಗಿದ್ದು, ಕಂಪನಿ ತನ್ನ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಹಾಗೂ ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ತಂತ್ರಜ್ಞಾನಗಳ ಮೇಲೆ ಹೆಚ್ಚಿನ ಒತ್ತು ನೀಡಲು ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದೆ.




