
ಬೆಂಗಳೂರು: ಕೇಂದ್ರ ಸರ್ಕಾರವು ಮೋಟಾರು ವಾಹನ ಕಾಯ್ದೆಯಲ್ಲಿ ಮಹತ್ವದ ತಿದ್ದುಪಡಿ ಮಾಡಿ, ಚಾಲನಾ ಪರವಾನಗಿ (DL) ಅವಧಿ ಮುಗಿದ ನಂತರವೂ 30 ದಿನಗಳ ಗ್ರೇಸ್ ಅವಧಿಯನ್ನು ಮರುಜಾರಿಗೆ ತಂದಿದ್ದು, ಈ ಅವಧಿಯಲ್ಲಿ ಅಪಘಾತ ಸಂಭವಿಸಿದರೂ ವಿಮೆ ಕ್ಲೇಮ್ ಮಾಡಲು ಅವಕಾಶ ನೀಡಲಾಗಿದೆ. 2019ರ ತಿದ್ದುಪಡಿಯಲ್ಲಿ ರದ್ದುಗೊಂಡಿದ್ದ ಈ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿರುವುದು ವಾಹನ ಸವಾರರಿಗೆ ದೊಡ್ಡ ನೆರವಾಗಲಿದೆ. ಡಿಎಲ್ ನವೀಕರಣವು ಇನ್ನು ಮುಂದೆ ಎಕ್ಸ್ಪೈರಿ ದಿನಾಂಕದಿಂದ ಅಲ್ಲ, ಅರ್ಜಿ ಸಲ್ಲಿಸಿದ ದಿನಾಂಕದಿಂದಲೇ ಜಾರಿಗೆ ಬರಲಿದೆ. ಸವಾರರು ತಮ್ಮ ನಿಯೋಜಿತ ವ್ಯಾಪ್ತಿಗೆ ಸೀಮಿತವಾಗದೇ ರಾಜ್ಯದ ಯಾವುದೇ ಆರ್ಟಿಒ ಕಚೇರಿಯಲ್ಲಿ ನೋಂದಣಿ ಅಥವಾ ಪರವಾನಗಿ ಸಂಬಂಧಿತ ಕಾರ್ಯಗಳನ್ನು ಮಾಡಿಸಿಕೊಳ್ಳಬಹುದು. ವಾಹನ ಮಾಲೀಕತ್ವ ವರ್ಗಾವಣೆಯ ವೇಳೆ ವಿಮಾ ಸಂಸ್ಥೆಗೆ ಮಾಹಿತಿ ನೀಡುವ ಅವಧಿಯನ್ನು 14 ದಿನಗಳಿಂದ 30 ದಿನಗಳಿಗೆ ವಿಸ್ತರಿಸಲಾಗಿದೆ. ಇದರ ಜೊತೆಗೆ, ಸಂಚಾರಿ ನಿಯಮ ಉಲ್ಲಂಘನೆಗಳ ಮೇಲೆ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದು, ವಾಹನಗಳಿಂದ ಕರ್ಕಶ ಶಬ್ದ ಮಾಡಿದರೆ ಮೊದಲ ಬಾರಿ ಎಚ್ಚರಿಕೆ, ಎರಡನೇ ಬಾರಿ ₹10,000 ದಂಡ ವಿಧಿಸಲಾಗುತ್ತದೆ; ರಸ್ತೆ ಸುರಕ್ಷತೆಗೆ ಧಕ್ಕೆ ಅಥವಾ ವಾಯು ಮಾಲಿನ್ಯ ಉಂಟುಮಾಡಿದರೆ ಮೊದಲ ತಪ್ಪಿಗೆ ₹10,000 ದಂಡ ಹಾಗೂ 3 ತಿಂಗಳ ಡಿಎಲ್ ಅಮಾನತು, ಮರುಕಳಿಸಿದರೆ 6 ತಿಂಗಳ ಜೈಲು ಶಿಕ್ಷೆ ಅಥವಾ ₹10,000 ದಂಡ ವಿಧಿಸಬಹುದು. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ತಾಂತ್ರಿಕ ದೋಷದಿಂದ ಅಪಘಾತವಾಗಿ ಗಾಯ ಅಥವಾ ಆಸ್ತಿ ಹಾನಿಯಾದರೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹5,000 ರಿಂದ ₹10,000ರವರೆಗೆ ದಂಡ ವಿಧಿಸಲಾಗುತ್ತದೆ. ಆದರೆ 30 ದಿನಗಳ ಗ್ರೇಸ್ ಅವಧಿ ಇದ್ದರೂ ವಿಮಾ ಪ್ರಮಾಣಪತ್ರವನ್ನು ಸಮಯಕ್ಕೆ ನವೀಕರಿಸದಿದ್ದರೆ, ಹೊಸ ವಿಮೆ ಪಡೆಯಲು ವಾಹನದ ಭೌತಿಕ ಪರಿಶೀಲನೆ ಕಡ್ಡಾಯವಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.




