ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ ನಂಬಿ ಕಡೂರು ತಾಲೂಕಿನ ಕಲ್ಲೇಗೌಡ ಎಂಬ ವ್ಯಕ್ತಿ ಕೋಟಿಗೂ ಹೆಚ್ಚು ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಫೇಸ್ಬುಕ್ನಲ್ಲಿ ಕಂಡ FYERS ಎಂಬ ಟ್ರೇಡಿಂಗ್ ಲಿಂಕ್ ಮೂಲಕ ಸಂಪರ್ಕಕ್ಕೆ ಬಂದ ದುಷ್ಕರ್ಮಿಗಳು, F8-FYERS ಸೆಕ್ಯೂರಿಟಿ ಗ್ರೂಪ್ ಎಂಬ ವಾಟ್ಸಾಪ್ ಗುಂಪಿಗೆ ಸೇರಿಸಿ QIB-iPO ಟ್ರೇಡಿಂಗ್ ಲಿಂಕ್ನಲ್ಲಿ ಖಾತೆ ತೆರೆಯುವಂತೆ ಮಾಡಿ ಮೋಸ ನಡೆಸಿದ್ದಾರೆ. ಆರಂಭದಲ್ಲಿ 60 ಸಾವಿರ ಲಾಭ ಸಿಗುತ್ತದೆ ಎಂದು ನಂಬಿಸಿ 17,800 ರೂ. ಹಾಕಿಸಿಕೊಂಡು ವಿಶ್ವಾಸ ಗಳಿಸಿದ ಬಳಿಕ, ಹೆಚ್ಚಿನ ಲಾಭದ ಆಸೆ ಹುಟ್ಟಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಈ ರೀತಿಯಾಗಿ ಕಲ್ಲೇಗೌಡ ಒಟ್ಟು 1 ಕೋಟಿ 28 ಲಕ್ಷ 10 ಸಾವಿರ ರೂ. ಹೂಡಿಕೆ ಮಾಡಿ ಲಾಭ ಬರುತ್ತಿದೆ ಎಂದು ನಂಬಿಕೊಂಡಿದ್ದರು. ಆದರೆ ಹಣವನ್ನು ವಾಪಸ್ ಪಡೆಯಲು ಯತ್ನಿಸಿದಾಗ ಸಾಧ್ಯವಾಗದೇ ಮೋಸವಾಗಿರುವುದು ತಿಳಿದು, ಬಳಿಕ ಚಿಕ್ಕಮಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
