
ಕಳೆದ ಒಂದು ವಾರದಿಂದ ಯಾವ ಚಾನೆಲ್ ನೋಡಿದರು ಅತ್ಯಾಚಾರದ ಕುರಿತ ವರದಿ, ಚರ್ಚೆಗಳೇ ಮಹತ್ವ ಪಡೆದುಕೊಂಡಿವೆ. ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚುತ್ತಾ ಇದೆ ಅಂತ ಮಾತಾಡೋದನ್ನ ಕೇಳಿದೀವಿ. ಇತ್ತೀಚೆಗೆ ಅಂದ್ರೆ ಅರ್ಥ ಹಿಂದೆ ಹೀಗಿರಲಿಲ್ಲ ಅಂತ ತಾನೆ! yes, ಕಾಲ ಬದಲಾಗಿದೆ ಅನ್ನಬಹುದು. ಆದರೆ ನನ್ನ ಪ್ರಕಾರ ಕಾಲಕ್ಕಿಂತ ಹೆಚ್ಚಾಗಿ ಮನುಷ್ಯನ ಜೀವನ ಶೈಲಿ, ಮನಸ್ಥಿತಿಗಳು ಬದಲಾಗಿವೆ ಅಂದರೆ ಅದು ಹೆಚ್ಚು ಸೂಕ್ತ. ಇವತ್ತು ಸಾವಿರಾರು ಜನರು ಬೀದಿಗಿಳಿದು ಅತ್ಯಾಚಾರಿಗಳಿಗೆ ಗಲ್ಲಿಗೇರಿಸಿ, ಬಂಧಿಸಿ, ಗುಂಡಿಟ್ಟು ಕೊಲ್ಲಿ ಎಂದು ಆಕ್ರೋಶದ ಮಾತಾಡುತ್ತಾರೆ. ಇದು ಕಾನೂನಿಗೆ ಸಂಬಂಧಿಸಿದ ವಿಷಯ. ಅತ್ಯಾಚಾರಿಗೆ ಯಾವ ಶಿಕ್ಷೆ ಎಂಬುದರ ಚರ್ಚೆ ನಮಗೆ ಬೇಡ. ಒಬ್ಬ ವ್ಯಕ್ತಿ ಅತ್ಯಾಚಾರಿಯಾಗಿ ರೂಪುಗೊಂಡಿದ್ದೇಕೆ? ಇದನ್ನು ಮೊದಲು ಯೋಚಿಸೋಣ. ಮನಶಾಸ್ತ್ರ(ಸೈಕಾಲಜಿ) ಇದಕ್ಕೆ ಸಾಕಷ್ಟು ಕಾರಣ ಕೊಡಬಹುದು. ಆದರೆ ನಾವು ನೀವು ಸಾಮಾನ್ಯ ಜನರಾಗಿ ಯೋಚಿಸೋಣ. ನಾನಾಗಲೇ ಹೇಳಿದಂತೆ ಇಂತಹ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗಿದೆ. ಸ್ವಲ್ಪ ಯೋಚನೆ ಮಾಡಿ. ಇದಕ್ಕೂ ಮುನ್ನ ಹಿಂದಿನ ನಮ್ಮ ಜೀವನ ಶೈಲಿಯನ್ನೊಮ್ಮೆ ನೆನಪಿಸಿಕೊಳ್ಳಬೇಕು. (ಕೆಲವರು ಇದನ್ನ ಹಿರಿಯರಿಂದ ಕೇಳಿಯೇ ತಿಳಿದುಕೊಳ್ಳಬೇಕು) ಆಗೆಲ್ಲ ತುಂಬು ಕುಟುಂಬಗಳು, ಒಂದು ಮನೆಯೆಂದರೆ ಎಂಟು ಹತ್ತು ಜನರ ವಾಸವಿರುತ್ತಿತ್ತು. ಅಕ್ಕ, ತಮ್ಮ, ದೊಡ್ಡಮ್ಮ, ಚಿಕ್ಕಪ್ಪ, ಅಜ್ಜ-ಅಜ್ಜಿ ಎಲ್ಲರೊಂದಿಗೆ ನಮ್ಮ ಬದುಕು ಅರಳಿಕೊಳ್ಳುತ್ತಿತ್ತು. ಅಮ್ಮನೊಂದಿಗೆ ಮುನಿಸಿಕೊಂಡರೆ ಚಿಕ್ಕಮ್ಮ ದೊಡ್ಡಮ್ಮರ ಸೆರಗು ಹಿಡಿದು ಓಡಾಡುತ್ತಿದ್ದೆವು. ಮನೆಯಲ್ಲಿ ಯಾರೋ ಒಬ್ಬರು ದೊಡ್ಡದಾಗಿ ಕಣ್ಣು ಬಿಟ್ಟರು ಸಾಕು. ನಾವು ಸೈಲೆಂಟಾಗಿ ಬಿಡುತ್ತಿದ್ದೆವು. ಇದೇನಿದು ಅತ್ಯಾಚಾರದ ಕುರಿತು ಮಾತಾಡುತ್ತಿದ್ದವನು ಬೇರೆನೋ ಹೇಳುತ್ತಿದ್ದಾನಲ್ಲ ಅಂದುಕೊಳ್ಳಬೇಡಿ. ಅದನ್ನೆ ನಾನು ಹೇಳುತ್ತಿರುವುದು. ಒಂದನೇ ತರಗತಿ ಓದುತ್ತಿರುವ ಹುಡುಗಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂದರೆ ಅದು ಆತನ ಮಾನಸಿಕ ದೌರ್ಬಲ್ಯ ಆ ಪುಟ್ಟ ಬಾಲಕಿಯಿಂದ ಈತನ ಸೆಕ್ಸ್ ವಾಂಛೆ ಈಡೇರಲು ಸಾಧ್ಯವೇ ಇರುವುದಿಲ್ಲ. ಅದು ಆತನಿಗು ಗೊತ್ತಿರುತ್ತದೆ. ಆದರೂ ಅತ್ಯಾಚಾರಕ್ಕೆ ಮುಂದಾಗುತ್ತಾನೆ ಎಂದರೆ ಏನರ್ಥ? ನಾನು ಹೇಳಿದಂತೆ ಮಾನಸಿಕ ದೌರ್ಬಲ್ಯ ತಾನೆ! ಅಂಥದ್ದೊಂದು ಮನಸ್ಥಿತಿಗೆ ಕಾರಣವೇನು ಗೊತ್ತಾ, ಅದೇ ನಾನು ಆಗ ಹೇಳಿದಂತೆ ಬದಲಾದ ಬದುಕಿನ ಶೈಲಿ! ನಮಗೆ ಇಂದು ಸಂಬಂಧಗಳ ಮಹತ್ವ ಗೊತ್ತಿಲ್ಲ. ಕಾರಣ ನಾವು ಮೊದಲಿನಂತೆ ತುಂಬು ಕುಟುಂಬದಲ್ಲಿ ಬೆಳೆಯುತ್ತಿಲ್ಲ. ಆ ಕಾರಣದಿಂದ ಇಂದು ಮನುಷ್ಯನ ಮನಸ್ಥಿತಿ, ಭಾವನೆಗಳು ನಮಗೆ ಅರ್ಥವಾಗುತ್ತಿಲ್ಲ. ಚಿಕ್ಕಂದಿನಿಂದ ಮನೆಯವರ ಪ್ರೀತಿ, ಅಕ್ಕಪಕ್ಕದವರ ಅಕ್ಕರೆಯ ನಡುವೆ ಬೆಳೆದವನು ಖಂಡಿತ ಅತ್ಯಾಚಾರಿಯಾಗಲಾರ! ಅಂತಹ ವಾತಾವರಣದಲ್ಲಿ ಬೆಳೆಯದವರು ಅತ್ತಿಗೆಯ ಮೇಲೆ ಮೈದುನ, ತಂದೆಯಿಂದ ಮಗಳು, ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ ನಡೆಯುತ್ತದೆ! ಇದು ಕೇವಲ ಅತ್ಯಾಚಾರಕ್ಕೆ ಸೀಮಿತವಾಗಿಲ್ಲ. ಆಸ್ತಿಗಾಗಿ ಅಣ್ಣ-ತಮ್ಮನನ್ನೇ ಕೊಲೆಗೈಯುತ್ತಿರುವ ಘಟನೆಗಳು ಸಾಕಷ್ಟಿವೆ. ಇನ್ನು ಗಂಡ ಹೆಂಡಿರ ವಿಚ್ಛೇದನ ಪ್ರಕರಣಗಳು ಪ್ರತಿದಿನ ನಡೆಯುತ್ತಲೇ ಇರುತ್ತದೆ. ಇದನ್ನೆಲ್ಲ ಗಮನಿಸಿದರೆ ನಾನು ಹೇಳಿದ್ದರಲ್ಲಿ ತಪ್ಪಿದೆ ಅನ್ಸುತ್ತಾ? ವಿಜ್ಞಾನದ ಹೆಸರಿನಲ್ಲಿ ನಾವು ಕಲಿಯಬೇಕಿದ್ದ ಸಂಸ್ಕಾರ, ರೂಢಿಸಿಕೊಳ್ಳಬೇಕಿದ್ದ ಸಂಸ್ಕೃತಿಯನ್ನು ಕಾಲ ಕಸ ಮಾಡಿಕೊಂಡಿದರ ಪರಿಣಾಮವಿದು. ರಾಮ-ಭರತರ ಸಹೋದರ ಪ್ರೀತಿಯ ಕತೆ ಅರಿತವನು ಆಸ್ತಿಗಾಗಿ ಅಣ್ಣನನ್ನು ಕೊಲ್ಲಲಾರ! ಲಕ್ಷ್ಮಣನಿಗೆ ಸೀತೆಯ ಮೇಲಿದ್ದ ಮಾತೃಭಾವ, ಗೌರವದ ಕತೆ ಕೇಳಿ ಬೆಳೆದ ಹುಡುಗ ಅತ್ತಿಗೆಯನ್ನ ಕಾಮದೃಷ್ಠಿಯಿಂದ ನೋಡಲು ಸಾಧ್ಯವೇ?
ವೀ ವಾಂಟ್ ಜಸ್ಟೀಸ್ ಅಂತ ಬೀದಿಯಲ್ಲಿ ಅರಚಿಕೊಂಡರೆ ಅತ್ಯಾಚಾರ ನಿಲ್ಲುವುದಿಲ್ಲ. ಅತ್ಯಾಚಾರಿಯನ್ನು ಗಲ್ಲಿಗೇರಿಸಬಹುದು, ಗುಂಡಿಟ್ಟು ಕೊಲ್ಲಲ್ಲುಬಹುದು. ಅತ್ಯಾಚಾರಕ್ಕೆ ಒಳಗಾದ ಹೆಣ್ಣಿನ ದೇಹದ ನೋವು ಶಮನಗೊಳ್ಳಬಹುದು. ಆದರೆ ಮನಸ್ಸಿನ ಮೇಲಾದ ಗಾಯ ಮಾಸುವುದಿಲ್ಲ. ಇದಕ್ಕೆ ವಿಧಿ ವಿಜ್ಞಾನ ಪ್ರಯೋಗ ಶಾಲೆಯವರು ಯಾವ ರಿಪೋರ್ಟು ಕೊಡುವುದಿಲ್ಲ. ಬದುಕಿನಲ್ಲಿ ಕಳೆದುಕೊಂಡ ಪ್ರೀತಿ-ವಾತ್ಸಲ್ಯಗಳನ್ನ ನೋವಿಗೆ ಸ್ಪಂದಿಸುವುದನ್ನು ರೂಢಿಸಿಕೊಂಡು, ನಮ್ಮೊಳಗಿನ ರಾಕ್ಷಸನನ್ನು ಧಮನಗೊಳಿಸಿ ಮನುಷ್ಯತ್ವವನ್ನು ತಂದುಕೊಳ್ಳಬೇಕು. ಸಂಸ್ಕಾರ, ಸಂಸ್ಕೃತಿಯ ಅರಿವು ಮೂಡುವವರೆಗು ಇದೇ ವೀ ವಾಂಟ್ ಜಸ್ಟೀಸ್ ಅಂತ ಅರಚುತ್ತಿರಬೇಕು ಏನಂತೀರಾ?





