
ಬ್ರಾಹ್ಮಿ: ಗಿಡವು ಪ್ರಸಿದ್ಧ ಆಯುರ್ವೇದ ಔಷಧೀಯ ಸಸ್ಯಗಳಲ್ಲಿ ಒಂದಾಗಿದ್ದು, ಸಂಶೋಧನೆಯ ಪ್ರಕಾರ ಇದರಲ್ಲಿ ಬ್ಯಾಕೋಸೈಡ್ ಎಂಬ ಸಕ್ರಿಯ ಸಂಯುಕ್ತವಿದೆ. ಇದು ನರಕೋಶಗಳ ನಡುವಿನ ಸಂವಹನವನ್ನು ಉತ್ತೇಜಿಸಿ ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಲು ಸಹಕಾರಿಯಾಗಿದೆ. ಹಳ್ಳಿಗಳಲ್ಲಿ ಮನೆ ಹಿತ್ತಲಲ್ಲಿ ಅಥವಾ ಗದ್ದೆಗಳ ಹತ್ತಿರ ಸುಲಭವಾಗಿ ದೊರೆಯುವ ಈ ಮೂಲಿಕೆಯನ್ನು ಪೂರ್ವಜರ ಕಾಲದಿಂದಲೇ ಔಷಧಿಯಾಗಿ ಬಳಸಲಾಗುತ್ತಿದೆ. ಒಂದೆಲಗ ಎಂದೂ ಕರೆಯಲ್ಪಡುವ ಬ್ರಾಹ್ಮಿ ಎಲೆಗಳನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚುವುದರ ಜೊತೆಗೆ ಮೆದುಳಿನ ಆರೋಗ್ಯ ಸುಧಾರಣೆಯಾಗುತ್ತದೆ ಎಂದು ಪೌಷ್ಟಿಕ ತಜ್ಞರು ತಿಳಿಸುತ್ತಾರೆ. ಬ್ರಾಹ್ಮಿಯಲ್ಲಿರುವ ಸಕ್ರಿಯ ಸಂಯುಕ್ತಗಳು ನರಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿ ಯಾವುದೇ ವಿಷಯವನ್ನು ಬೇಗನೆ ಗ್ರಹಿಸಿ ದೀರ್ಘಕಾಲ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತವೆ. ಇದಲ್ಲದೆ ಬ್ರಾಹ್ಮಿ ಅಡಾಪ್ಟೋಜೆನಿಕ್ ಗುಣಗಳನ್ನು ಹೊಂದಿದ್ದು ದೇಹದಲ್ಲಿನ ಒತ್ತಡ ಮತ್ತು ಆಯಾಸವನ್ನು ಕಡಿಮೆ ಮಾಡಲು ನೆರವಾಗುತ್ತದೆ. ದೇಹದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ನಿಯಂತ್ರಿಸುವುದರ ಜೊತೆಗೆ ಸೆರೋಟೋನಿನ್ ಮತ್ತು ಡೋಪಮೈನ್ನಂತಹ ಮನೋಭಾವ, ನೆನಪು ಹಾಗೂ ಕಲಿಕೆಗೆ ಸಹಾಯಕವಾಗುವ ರಸಾಯನಗಳ ಸಮತೋಲನ ಕಾಪಾಡುತ್ತದೆ. ಇದರ ಪರಿಣಾಮವಾಗಿ ಮನಸ್ಥಿತಿ ಸ್ಥಿರವಾಗಿದ್ದು ಧನಾತ್ಮಕ ಚಿಂತನೆ ಹೆಚ್ಚಾಗುತ್ತದೆ. ಜೊತೆಗೆ ಬ್ರಾಹ್ಮಿ ಎಲೆಗಳನ್ನು ಸೌಂದರ್ಯ ವರ್ಧಕವಾಗಿಯೂ ಬಳಸಬಹುದು, ಇದರಿಂದ ತ್ವಚೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಹೊಳೆಯುತ್ತದೆ. ಬ್ರಾಹ್ಮಿಯನ್ನು ಕ್ಯಾಪ್ಸುಲ್ ಅಥವಾ ಟಾನಿಕ್ ರೂಪದಲ್ಲಿ ಸೇವಿಸಬಹುದು, ಬ್ರಾಹ್ಮಿ ಚಹಾ ಕುಡಿಯುವುದರಿಂದ ಮನಸ್ಸಿಗೆ ಹಿತವಾಗುತ್ತದೆ. ಹಾಗೆಯೇ ಬ್ರಾಹ್ಮಿ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಒಂದೆಲಗದ ಚಟ್ನಿ ಅಥವಾ ತಂಬುಳಿ ರೂಪದಲ್ಲಿಯೂ ಇದನ್ನು ಆಹಾರದಲ್ಲಿ ಸೇರಿಸಿ ಬಳಸಬಹುದು.



