
Karnataka Budget 2026: ರಾಜ್ಯ ಬಜೆಟ್ ಮಂಡನೆ ಆರಂಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರುದ್ಯೋಗಿ ಯುವಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 56 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ತಮ್ಮ 17ನೇ ಬಜೆಟ್ ಭಾಷಣದಲ್ಲಿ ಘೋಷಣೆ ಮಾಡಿದ್ದು, ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಯುವಕರಿಗೆ ಹೊಸ ಭರವಸೆ ಮೂಡಿಸಿದೆ. ಇತ್ತೀಚೆಗೆ ಧಾರವಾಡದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ನಿರುದ್ಯೋಗಿ ಯುವಕರು ನಡೆಸಿದ ಪ್ರತಿಭಟನೆ ಕೂಡ ಈ ನಿರ್ಧಾರಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಿದ್ದ ಯುವಕರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ಪೊಲೀಸ್, ಶಿಕ್ಷಣ, ಆರೋಗ್ಯ, ಕಂದಾಯ ಹಾಗೂ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹೆಚ್ಚಿನ ನೇಮಕಾತಿ ನಡೆಯುವ ಸಾಧ್ಯತೆ ಇದೆ. ಆದರೆ ಯಾವ ಇಲಾಖೆಗೆ ಎಷ್ಟು ಹುದ್ದೆಗಳು ಎನ್ನುವ ಅಧಿಕೃತ ವಿವರ ಇನ್ನಷ್ಟೇ ಹೊರಬೀಳಬೇಕಿದ್ದು, ನೇಮಕಾತಿ ಪ್ರಕ್ರಿಯೆ ಶೀಘ್ರ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ. ಬಜೆಟ್ನಲ್ಲಿ ಘೋಷಣೆ ಹೊರಬಂದ ನಂತರ ಕೆಪಿಎಸ್ಸಿ (KPSC) ಮತ್ತು ಕೆಇಎ (KEA) ಮೂಲಕ ಶೀಘ್ರವೇ ಅಧಿಕೃತ ನೋಟಿಫಿಕೇಶನ್ ಪ್ರಕಟವಾಗುವ ಸಾಧ್ಯತೆ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರಲ್ಲಿ ಈ ಘೋಷಣೆ ಹೊಸ ಉತ್ಸಾಹ ಮೂಡಿಸಿದೆ.




