
ಚಿಕ್ಕಮಗಳೂರು: ತಾಲೂಕಿನ ಹುಣಸೇಹಳ್ಳಿ ಸಮೀಪದ ಪುರ ಗ್ರಾಮದಲ್ಲಿ ಆನೆ ದಾಳಿಯಿಂದ ಕೂಲಿ ಕಾರ್ಮಿಕ ಯಲ್ಲಪ್ಪ (45) ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ಸಮೀಪದ ತಿರುವಳ್ಳಿ ಗ್ರಾಮದ ನಿವಾಸಿಯಾಗಿದ್ದ ಯಲ್ಲಪ್ಪ ಅವರು ಕೂಲಿ ಹಾಗೂ ಗಾರೆ ಕೆಲಸ ಮಾಡುತ್ತಿದ್ದರು. ತೋಟದ ಹಾದಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಾಗೇಶ್ ಗೌಡರ ತೋಟದ ಮೂಲಕ ಶ್ರೀಧರ್ ಗೌಡ ಅವರ ತೋಟದ ಲೈನ್ ಮನೆ ಕಡೆ ಸಾಗುವಾಗ ಆನೆ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.



