
ಅದನ್ನ ಡಿಪೆಂಡೆಂಟ್ ಅಂತ ಹೇಳ್ತಾರೆ…
ನಾವೆಲ್ಲರು ಒಂದಲ್ಲ ಒಂದು ರೀತಿಯಲ್ಲಿ, ಒಬ್ಬರಲ್ಲ ಒಬ್ಬರಿಗೆ ಅವಲಂಬಿತರೇ ಆದರೆ ಈ ಅವಲಂಬನೆ ಒಂದು ಲಿಮಿಟ್ಟನಲ್ಲಿರಬೇಕು. ವ್ಯಕ್ತಿಯೊಬ್ಬರ ಮೇಲೆ ಡಿಪೆಂಡ್ ಆದಾಗ ಅವರ ಮೇಲೆ ನಾವೊಂದು ಅಧಿಕಾರ ಸೃಷ್ಟಿಸಿಕೊಂಡು ಬಿಡುತ್ತೇವೆ. ತೊಂದರೆ ಶುರುವಾಗೋದೆ ಅಲ್ಲಿಂದ. ನಾವು ಯಾರ ಮೇಲೆ ಡಿಪೆಂಡ್ ಆಗಿರುತ್ತೇವೋ ಆ ವ್ಯಕ್ತಿಗೆ ನಾವು ಡಿಪೆಂಡ್ ಆಗಿದ್ದೀವಿ ಅನ್ನೋದು ಗೊತ್ತಾಗಿ ಆತ ನಮ್ಮ ಭಾವನೆಗಳಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸಿದರೆ ವೆಲ್. ಆದ್ರೆ ತುಂಬಾ ಸಲ ಹಾಗಾಗುವುದಿಲ್ಲ ನಮ್ಮ ನಿರೀಕ್ಷೆಗಳಿಗೆ ಆತ ಸ್ಪಂದಿಸುವುದಿಲ್ಲ. ಆಗ ನಮಗೆ ಹರ್ಟ್ ಆಗುತ್ತೆ. ಹೀಗೆ ಸಣ್ಣ ಸಣ್ಣ ವಿಷಯಕ್ಕೂ ಒಬ್ಬರ್ಯಾರೋ ಮೇಲೆ ಡಿಪೆಂಡ್ ಆಗಿ ಬಿಡೋ ಸ್ಥಿತಿ ನಮ್ಮನ್ನು ತುಂಬಾ ಘೋರ ಸ್ಥಿತಿಗೆ ತಂದು ನಿಲ್ಲಿಸಿ ಬಿಡುತ್ತೆ. ನಮ್ಮ ಮಾತನ್ನ, ಮುನಿಸನ್ನ, ಸಂತೋಷವನ್ನ, ದುಃಖವನ್ನ ಶೇರ್ ಮಾಡಿಕೊಳೋಕೆ ಆ ಕ್ಷಣಕ್ಕೆ ಯಾರಾದರೊಬ್ಬರು ಬೇಕು ಅನಿಸಿ ಬಿಡುತ್ತೆ. ಟೋಟಲಿ ನಮ್ಮ ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಬಲ್ಲ ಜೀವವೊಂದನ್ನು ನಾವಾಗಲೇ ಗುರುತಿಸಿಟ್ಟುಕೊಂಡಿರುತ್ತೇವೆ. ಸೋ ನಾವು ಆ ಜೀವಕ್ಕೆ ಡಿಪೆಂಡ್ ಆಗಿದ್ದೇವೆ ಅಂತರ್ಥ! ಅತ್ತಲಿನ ವ್ಯಕ್ತಿ ಒಂದು ಹಂತದವರೆಗೆ ನಮಗೆ ಪ್ರತಿ ಸ್ಪಂದನೆ ನೀಡಬಹುದು, ಒಂದಿಷ್ಟು ಕಾಲ ನಮ್ಮನ್ನು ಬರಿಸಬಹುದು, ನಮ್ಮ ದನಿಗೆ ಕಿವಿಯಾಗಬಹುದು, ದುಃಖಕ್ಕೆ ಹೆಗಲಾಗಬಹುದು. ಆದರೆ ಮನುಷ್ಯನ ತಾಳ್ಮೆಯ ಆಯಸ್ಸು ಬಹಳ ಕಡಿಮೆ. ನಾವು ನಮ್ಮ ಫೀಲಿಂಗ್ ಶೇರ್ ಮಾಡಿಕೊಳ್ಳಲಿಕೆ ನಮ್ಮ ಸಮಾಧಾನಕ್ಕೆ ನಂಗೆ ಇವರಿದ್ದಾರೆ ಬಿಡು ಅಂತ ಅಂದುಕೊಂಡ ಆತ್ಮಬಂಧು ಗೆಳೆಯ ಕೈಕೊಡವಿಕೊಂಡು ಹೊರಟು ಬಿಡುತ್ತಾರೆ. ಆಗಲೇ ನಮಗೆ ತಬ್ಬಲಿ ಆಗಿ ಬಿಟ್ಟೆ ಅಂತ ಅನಿಸುವುದು, ಸಾವಿರ ಜನಗಳ ಮಧ್ಯೆ ನಿಂತಾಗಲೂ ನಾನು ಒಂಟಿ ಅನ್ನೋ ಭಾವ ಕಾಡುವುದು, ನನ್ನನ್ನು ಅರ್ಥ ಮಾಡಿಕೊಳ್ಳೋರು ಈ ಜಗತ್ತಿನಲ್ಲಿಯೇ ಯಾರು ಇಲ್ಲ ಅಂತ ಅನಿಸಿ ಬಿಡೋದು. ಆಗಲೇ ಅಲ್ವಾ ನನ್ನ ಹಣೆಬರಹ, ನನ್ನದು ಕೆಟ್ಟ ನಕ್ಷತ್ರ ಅಂತ ಬೈದುಕೊಳ್ಳೋದು. ಫೈನಲಿ ಜೀವವೇ ಬೇಡ ಅಂತ ಅಂದುಕೊಳ್ಳುವುದು! Just wait ನೀನು ನನ್ನ ಮೇಲೆ ಡಿಪೆಂಡ್ ಆಗಿರೂ ಅಂತ ಯಾರಾದ್ರು ಹೇಳ್ತಾರಾ? ನೋ ವೇ, ನಮಗೆ ನಾವೇ ಯಾರನ್ನೋ ಆಯ್ಕೆ ಮಾಡಿಕೊಂಡು ಅವರ ಮೇಲೆ ಅವಲಂಬಿತರಾಗಿ, ಅವರೇ ನಮ್ಮ ಪ್ರಪಂಚ ಅಂತ ಬದುಕಿದ್ದು ಸ್ವಯಂಕೃತ ಅಪರಾಧ ಅಲ್ವಾ? ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ತನ್ನ ಕುರಿತೇ ಯೋಚಿಸುತ್ತಾನೆ. ಬೇರೆಯವರ ಕಷ್ಟ ಕಟ್ಟಿಕೊಂಡು ಅವನಿಗೇನಾಬೇಕಿದೆ? ನಿಮ್ಮ ಗೆಳೆಯನೂ ಕೂಡ ಹಾಗೆ ಅಲ್ವಾ? ಬೇರೆಯವರ ಕಷ್ಟ ಕೇಳುವ ಸಂತರು, ಸಾಧುಗಳು ಈ ಜಗತ್ತಿನಲ್ಲಿ ಯಾರು ಇಲ್ಲ! ನಾವು ಅದೇಕೆ ಹಾಗಂದುಕೊಳ್ಳೊತ್ತೇವೋ ಗೊತ್ತಿಲ್ಲ. ನಾವು ನಮ್ಮ ನೆಮ್ಮದಿಯನ್ನು ಇನ್ನೊಬ್ಬರಿಂದ ನಿರೀಕ್ಷಿಸುತ್ತೇವೆ. ನಿಜ ಹೇಳ್ಬೇಕು ಅಂದ್ರೆ ನಮ್ಮ ಕೈಯಲ್ಲಿ ಸಂತೋಷವೆಂಬ ಬೆಣ್ಣೆ ಇಟ್ಟುಕೊಂಡು ನೆಮ್ಮದಿಯೆಂಬ ತುಪ್ಪಕ್ಕಾಗಿ ಅಲೆದಾಡುತ್ತಿರುತ್ತೇವೆ! ಅದಿರಲಿ, ನಾನು ಆಗ ಹೇಳಿದಂತೆ ಈ ಜಗತ್ತಿನಲ್ಲಿ ನನ್ನ ಅರ್ಥ ಮಾಡಿಕೊಳ್ಳೋರು ಯಾರು ಇಲ್ಲ ಅಂತ ನಿಮಗೆ ಯಾವತ್ತಾದರು ಅನ್ಸಿದೆಯಾ? ನಿಮ್ಮ ಉತ್ತರ ಹೌದು, ಆದರೆ ಅದು ಶುದ್ದ ನಾನ್ಸೆನ್ಸ್! ಯಾಕೆ ಗೊತ್ತಾ? ಸರಿಯಾಗಿ ನಮ್ಮ ಬೀದಿಯಲ್ಲಿರೋ ಜನರಿಗೆ ನಾವು ಯಾರು ಅಂತ ಗೊತ್ತಿರಲ್ಲ ಹಾಗಿರುವಾಗ ಇಡೀ ಜಗತ್ತಿನ ಕುರಿತು ಯೋಚಿಸಿದ್ರೆ ಅದು ಮೂರ್ಖತನ ಅಲ್ವಾ? ಕೊಂಚ ಮನಸ್ಸು ಹಗುರ ಮಾಡಿಕೊಂಡು ನೋಡಿದರೆ ಪಕ್ಕದ ಬೀದಿಯಲ್ಲೇ ನಮಗೊಬ್ಬ ಆತ್ಮೀಯ ಗೆಳೆಯ ಸಿಕ್ಕಿ ಬಿಡುತ್ತಾನೆ! ಬಟ್ ಬೀ ಕೇರ್ ಪುಲ್ ಅವನಿಗೆ ಅವನ ಸ್ವಂತ ಬದುಕಿದೆ. ಹಾಗಾಗಿ ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಬೆಡ್ಡ್ಗೆ ಬೀಳೋ ತನಕ ಏನೋ ಮಾಡಿದೆ ಅಂತ ಅವನಿಗೆ ಹೇಳಬೇಡಿ ಮತ್ತು ಅವನ ಕೇಳಲೂ ಬೇಡಿ. ನಿಮ್ಮನ್ನು ಸಮಾಧಾನಿಸಬಲ್ಲ ಹಾಗೂ ನಿಮ್ಮಲ್ಲೊಂದು ಛಲ ಹುಟ್ಟಿಸಿ, ನಿಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬಲ್ಲ ಸ್ನೇಹಿತನೊಬ್ಬನಿದ್ದಾನೆ. ಅವನ ಹೆಸರು ಪುಸ್ತಕ! ನಿಜ, ಓದೋ ಅಭ್ಯಾಸ ರೂಢಿಸಿಕೊಳ್ಳಿ. ನಾಲ್ಕು ಸಾಲುಗಳು ಕೋಡೋ ಸಮಾಧಾನ ನಿಮ್ಮ ಬದುಕನ್ನೇ ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತದೆ. ಅಂದ ಹಾಗೆ ಓದು ಅಂದ ಕ್ಷಣ ನೆನಪಾಯಿತು. ಜೀವನದಲ್ಲಿ ಕಷ್ಟ ಅಂತ ಇದ್ರೆ ಅದು ನಂಗೆ ಮಾತ್ರ ಅಂತ ಭಾವಿಸಿಕೊಂಡಿರೋ ಹೆಣ್ಣು ಮಕ್ಕಳು, ಗೃಹಿಣಿಯರು ತಪ್ಪದೇ ಯಂಡಮೂರಿಯವರು ಬರೆದ ಅಗ್ನಿ ಪ್ರವೇಶ ಪುಸ್ತಕವನ್ನು ಒಮ್ಮೆ ಓದಲೇಬೇಕು. ಸ್ತ್ರೀಯರು ಸಮಾಜದಲ್ಲಿ ಎದುರಿಸಬೇಕಾದ ಸಮಸ್ಯೆಗಳು ಮತ್ತು ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಅದರಲ್ಲಿ ಅದ್ಭುತವಾಗಿ ವಿವರಿಸಿದ್ದಾರೆ. ಓದಿದ ನಂತರ ನಂಗೊಂದು ಪತ್ರ ಬರೀರಿ ನಿಮ್ಮಲ್ಲೇನಾದ್ರು ಬದಲಾವಣೆ ಆಗಿದ್ದರೆ ಮಾತ್ರ!







