ಶೃಂಗೇರಿ: ಇತಿಹಾಸ ಹಾಗೂ ಪೌರಾಣಿಕ ಮಹತ್ವ ಹೊಂದಿರುವ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶ್ರೀ ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಈ ಬಾರಿಯ ಮಹಾ ರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಫೆಬ್ರವರಿ 4ರಂದು ಅದ್ಧೂರಿಯಾಗಿ ರಥೋತ್ಸವ ಜರುಗಲಿದೆ. ಈ ಮಹತ್ವದ ಉತ್ಸವಕ್ಕೆ ಪೂರಕವಾಗಿ ಜನವರಿ 31ರಿಂದಲೇ ಶ್ರೀ ಶಾರದಾ ಪೀಠದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಮೊದಲ ದಿನ ಶ್ರೀ ಶಕ್ತಿಗಣಪತಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ನಾಂದಿ ಹಾಡಲಾಗುತ್ತದೆ. ಫೆಬ್ರವರಿ 1ರಂದು ಧ್ವಜಾರೋಹಣ ಹಾಗೂ ಶತಚಂಡೀ ಮಹಾಯಾಗದ ಸಂಕಲ್ಪ, ಫೆಬ್ರವರಿ 2ರಂದು ಚಂಡೀಪಾರಾಯಣ ಮತ್ತು ಬ್ರಹ್ಮಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದ ಭಾಗವಾಗಿ ಫೆಬ್ರವರಿ 3ರಂದು ಮಲಹಾನಿಕರೇಶ್ವರ ದೇವಸ್ಥಾನದಿಂದ ಭವಾನಿ ಅಮ್ಮನವರ ಆಗಮನದೊಂದಿಗೆ ಜಗದ್ಗುರುಗಳ ಉಪಸ್ಥಿತಿಯಲ್ಲಿ ವಿಶೇಷ ಪೂಜೆಗಳು ಜರುಗಲಿದ್ದು, ಫೆಬ್ರವರಿ 4ರಂದು ಮಧ್ಯಾಹ್ನ 11 ಗಂಟೆಯ ಸುಮಾರಿಗೆ ವೇದಘೋಷಗಳ ನಡುವೆ ಜಗದ್ಗುರುಗಳ ನೇತೃತ್ವದಲ್ಲಿ ಮಹಾರಥೋತ್ಸವಕ್ಕೆ ಚಾಲನೆ ಸಿಗಲಿದೆ. ನಂತರ ಫೆಬ್ರವರಿ 5ರಂದು ಮಹಾಯಾಗದ ಪೂರ್ಣಾಹುತಿ ಹಾಗೂ ಸಂಜೆ ಅದ್ಭುತ ತೆಪ್ಪೋತ್ಸವ ನಡೆಯಲಿದ್ದು, ಫೆಬ್ರವರಿ 6ರಂದು ಮಹಾಸಂಪ್ರೋಕ್ಷಣೆಯೊಂದಿಗೆ ಈ ಸಾಲಿನ ಉತ್ಸವಕ್ಕೆ ತೆರೆ ಬೀಳಲಿದೆ. ಈ ಬಾರಿಯ ಶೃಂಗೇರಿ ಶಾರದೆಯ ಮಹಾ ರಥೋತ್ಸವಕ್ಕೂ ಭಕ್ತರ ಅಪಾರ ಆಗಮನ ನಿರೀಕ್ಷಿಸಲಾಗಿದ್ದು, ದೇವಾಲಯದ ವತಿಯಿಂದ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.
