ಸಮಯಕ್ಕೆ ತಕ್ಕಂತೆ ಬದಲಾಗುವ ಮನುಷ್ಯರಿಗೆ ಊಸರವಳ್ಳಿಯನ್ನು ಹೋಲಿಸಿ ಉದಾಹರಣೆ ನೀಡುವುದು ಸಾಮಾನ್ಯ. ಈ ಊಸರವಳ್ಳಿಯು ಹಲ್ಲಿಯ ಜಾತಿಗೆ ಸೇರಿದ ಸರೀಸೃಪವಾಗಿದ್ದು, ಪರಿಸರ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ತನ್ನ ಮೈಬಣ್ಣವನ್ನು ಬದಲಾಯಿಸುವ ವಿಶಿಷ್ಟ ಗುಣ ಹೊಂದಿದೆ. ಗೋಸುಂಬೆ ಎಂದು ಕರೆಯಲ್ಪಡುವ ಈ ಊಸರವಳ್ಳಿಯು ಉದಾಹರಣೆಗೆ ಶತ್ರುಗಳ ಭಯವಾದಾಗ ಎಲೆ–ಕೊಂಬೆಗಳ ನಡುವೆ ಬೆರೆತು ಹೋಗಲು ಹಸಿರು ಅಥವಾ ಕಂದು ಬಣ್ಣಕ್ಕೆ ತಿರುಗುತ್ತದೆ, ಬಿಸಿಲು ಹೆಚ್ಚಾದಾಗ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ತೆಳ್ಳನೆಯ ಬಣ್ಣಕ್ಕೆ ಮತ್ತು ಕೋಪ ಅಥವಾ ಆತಂಕದ ಸಮಯದಲ್ಲಿ ಗಾಢ ಬಣ್ಣಕ್ಕೆ ಬದಲಾಗುತ್ತದೆ. ಊಸರವಳ್ಳಿ ಯಾವಾಗಲೂ ಬಣ್ಣ ಬದಲಿಸುವುದಿಲ್ಲ, ಆದರೆ ಕೆರಳಿದಾಗ ಅಥವಾ ಹೆಣ್ಣು ಊಸರವಳ್ಳಿಯನ್ನು ಕಂಡಾಗ ಗಂಡುಗಳು ಹೆಚ್ಚು ಪ್ರಕಾಶಮಾನವಾದ ಬಣ್ಣ ತೋರಿಸುವುದು ಸಾಮಾನ್ಯ. ಈ ಬಣ್ಣ ಬದಲಾವಣೆಗೆ ‘ಇರಿಡೋಫೋರ್ಸ್’ ಎಂಬ ಚರ್ಮದ ವಿಶೇಷ ಕೋಶಗಳು ಕಾರಣವಾಗಿದ್ದು, ಹೆಣ್ಣು ಹಾಗೂ ಕಿರಿಯ ಊಸರವಳ್ಳಿಗಳ ಮೈಬಣ್ಣ ಸಾಮಾನ್ಯವಾಗಿ ಮಂಕಾಗಿರುತ್ತದೆ. ಜೊತೆಗೆ ಊಸರವಳ್ಳಿಯ ನಾಲಿಗೆ ದೇಹಕ್ಕಿಂತ ಉದ್ದವಾಗಿರುವುದು, ಎರಡೂ ಕಣ್ಣುಗಳನ್ನು ಸ್ವತಂತ್ರವಾಗಿ ಬೇರೆ ಬೇರೆ ದಿಕ್ಕಿನಲ್ಲಿ ತಿರುಗಿಸುವ ಸಾಮರ್ಥ್ಯ ಹೊಂದಿರುವುದು ಇದರ ಅಚ್ಚರಿಯ ಲಕ್ಷಣಗಳಾಗಿವೆ.
