ಬೆಂಗಳೂರು: ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೊ ಆಪರೇಟಿವ್ ಲಿಮಿಟೆಡ್ (ಇಫ್ಕೋ) ಕರ್ನಾಟಕದ ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ನ್ಯಾನೋ ಗೊಬ್ಬರ ಕಾರ್ಖಾನೆಯನ್ನು ಉದ್ಘಾಟಿಸಿದೆ. ಈ ಕಾರ್ಖಾನೆಯನ್ನು ಇಫ್ಕೋ ಮತ್ತು ಎನ್ಸಿಯುಐ ಅಧ್ಯಕ್ಷರಾದ ಶ್ರೀ ದಿಲೀಪ್ ಸಂಘಾಣಿ ಉದ್ಘಾಟಿಸಿ, ಈ ಕಾರ್ಖಾನೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹಾಗೂ ಮಾನ್ಯ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರ “ಸಹಕಾರದಿಂದ ಸಮೃದ್ಧಿ” ಎಂಬ ದೃಷ್ಟಿಕೋನವನ್ನು ಸಾಕಾರಗೊಳಿಸುವ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು. 12 ಎಕರೆ ವಿಸ್ತೀರ್ಣದಲ್ಲಿ ಸ್ಥಾಪಿತಗೊಂಡಿರುವ ಈ ಕಾರ್ಖಾನೆ ಪ್ರತಿದಿನ 2 ಲಕ್ಷ ನ್ಯಾನೋ ಯೂರಿಯಾ ಪ್ಲಸ್ ಬಾಟಲಿಗಳ ಉತ್ಪಾದನೆಯ ಸಾಮರ್ಥ್ಯ ಹೊಂದಿದೆ. ದೀರ್ಘಾವಧಿಯಲ್ಲಿ ಇದು ದಕ್ಷಿಣ ಭಾರತದಲ್ಲಿ ಸಾಂಪ್ರದಾಯಿಕ ಯೂರಿಯಾದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಆಮದು ವೆಚ್ಚವನ್ನು ಇಳಿಸುವುದರ ಜೊತೆಗೆ ನಿಖರ ಕೃಷಿಯನ್ನು (ಪ್ರಿಸಿಷನ್ ಫಾರ್ಮಿಂಗ್) ಉತ್ತೇಜಿಸುತ್ತದೆ. ಈ ಕಾರ್ಯಕ್ರಮದಲ್ಲಿ ನ್ಯಾನೋ ಘಟಕದ ಮುಖ್ಯಸ್ಥ ಸಂಜಯ್ ಕುಲಶ್ರೇಷ್ಠ ಸೇರಿದಂತೆ ನಿರ್ದೇಶಕ ಮಂಡಳಿಯ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
